ನೇಹಾ ಕೊಲೆ ಆರೋಪಿ ಜಾಮೀನು ಅರ್ಜಿ ವಜಾ

| Published : Aug 05 2025, 01:30 AM IST

ಸಾರಾಂಶ

ಜು. 29ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಾದ- ವಿವಾದ ಆಲಿಸಿ ಆ. 4ಕ್ಕೆ ತೀರ್ಪು ಕಾಯ್ದಿರಿಸಿತ್ತು. ದೂರುದಾರರ ಪರ ರಾಘವೇಂದ್ರ ಮುತಗೀಕರ ಮತ್ತು ಮಹೇಶ ವೈದ್ಯ ವಾದ ಮಂಡಿಸಿದ್ದರು.

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು 1ನೇ ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಆ. 6ರಂದು ವಿಚಾರಣೆ ಮುಂದೂಡಲಾಗಿದ್ದು, ಅಂದು ಫಯಾಜ್‌ ಖುದ್ದು ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಜು. 29ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಾದ- ವಿವಾದ ಆಲಿಸಿ ಆ. 4ಕ್ಕೆ ತೀರ್ಪು ಕಾಯ್ದಿರಿಸಿತ್ತು. ದೂರುದಾರರ ಪರ ರಾಘವೇಂದ್ರ ಮುತಗೀಕರ ಮತ್ತು ಮಹೇಶ ವೈದ್ಯ ವಾದ ಮಂಡಿಸಿದ್ದರು.

ಪ್ರಕರಣದ ಕುರಿತು ಆ. 6ರಂದು ವಿಚಾರಣೆ ನಡೆಯಲಿದ್ದು, ಆರೋಪಿ ಫಯಾಜ್‌ಗೆ ಖುದ್ದು ಹಾಜರಿರಲು ಕೋರ್ಟ್ ಸೂಚಿಸಿದೆ. ಈ ಹಿಂದೆ ಪ್ರಕರಣ ಬೆಳಗಾವಿಗೆ ವರ್ಗಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿದ್ದು, ಘಟನೆ ನಡೆದ ವ್ಯಾಪ್ತಿಯಲ್ಲೇ ವಿಚಾರಣೆ ನಡೆಸಲು ಆದೇಶಿಸಿತ್ತು ಎಂದು ದೂರುದಾರರ ಪರ ವಕೀಲರು ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ನೇಹಾ ತಂದೆ ನಿರಂಜನಯ್ಯ ಹಿರೇಮಠ, ಜಾಮೀನು ಅರ್ಜಿ ತಿರಸ್ಕರಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ತಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 18, 2024ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 24 ವರ್ಷದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ನಡೆದಿತ್ತು. 10ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣದ ಆರೋಪಿ ಬೆಳಗಾವಿ ಜಿಲ್ಲೆಯ ಫಯಾಜ್ ಕೊಂಡುನಾಯ್ಕ್ (24) ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಸೋಮವಾರ ಶ್ರೀರಾಮಸೇನೆ ಆರೋಪಿಗೆ ಜಾಮೀನು ನೀಡದಂತೆ ಆಗ್ರಹಿಸಿ ಬಿವಿಬಿ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿತ್ತು.