ಸಾರಾಂಶ
ಭೋಪಾಲ್: ಅಕ್ರಮ ನುಸುಳುಕೋರರು ತಲೆನೋವಾಗಿರುವ ಹೊತ್ತಿನಲ್ಲಿ, ಬಾಂಗ್ಲಾದೇಶದ ವ್ಯಕ್ತಿಯೊಬ್ಬ 28 ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಬಂದು, ತೃತೀಯ ಲಿಂಗಿಯ ಸೋಗಿನಲ್ಲಿ ವಾಸಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆತನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ವಲಸಿಗರ ಪತ್ತೆ ಭರದಿಂದ ನಡೆಯುತ್ತಿದ್ದ ವೇಳೆ, ಅಬ್ದುಲ್ ಕಲಾಂ ಎಂಬ ವ್ಯಕ್ತಿ ‘ನೇಹಾ’ ಎಂಬ ತೃತೀಯ ಲಿಂಗಿಯ ವೇಷದಲ್ಲಿ ಇದ್ದದ್ದಷ್ಟೇ ಅಲ್ಲದೆ, ಆಧಾರ್ ಕಾರ್ಡ್, ಮತಚೀಟಿ, ಪಾಸ್‌ಪೋರ್ಟ್ ಕೂಡ ಹೊಂದಿದ್ದು ಪತ್ತೆಯಾಗಿದೆ.
ಅತ್ತ ನೇಹಾ ನಿಜವಾಗಿಯೂ ತೃತೀಯಲಿಂಗಿಯೇ ಅಥವಾ ಅದು ಗುರುತನ್ನು ಮರೆಮಾಚುವ ಯತ್ನವಾಗಿತ್ತೇ ಎಂಬುದರ ಪರಿಶೀಲನೆಗೆ ಅಬ್ದುಲ್‌ನ ಲಿಂಗ ಪರಿಶೀಲನೆ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬಾಂಗ್ಲಾದಿಂದ ಭಾರತಕ್ಕೆ:
10 ವರ್ಷದವನಿದ್ದಾಗ ಭಾರತಕ್ಕೆ ಬಂದಿದ್ದ ಅಬ್ದುಲ್, 20 ವರ್ಷ ಮುಂಬೈನಲ್ಲಿ ನೆಲೆಸಿದ್ದ. ಬಳಿಕ ಭೋಪಾಲ್‌ಗೆ ಬಂದು, ‘ನೇಹಾ’ ರೂಪ ತಳೆದು, 8 ವರ್ಷಗಳ ಕಾಲ ಯಾರಿಗೂ ಸಂಶಯ ಬರದಂತೆ ನೆಲೆಸಿದ್ದ. ಈ 28 ವರ್ಷಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ಹಲವು ಬಾರಿ ಬಾಂಗ್ಲಾಗೆ ಹೋಗಿಬಂದಿದ್ದ.
ನೇಹಾಗೆ ಉಗ್ರ ನಂಟು?:
ಅಬ್ದುಲ್ ಬಂಧನದ ಬೆನ್ನಲ್ಲೇ, ಆತನ ಹಿಂದೆ ಇಂಥದ್ದೊಂದು ಜಾಲವೇ ಇದೆಯೇ ಎಂಬುದರ ಪತ್ತೆಗೆ ದೇಶದ ಭಯೋತ್ಪಾದನಾ ನಿಗ್ರಹ ದಳವೂ ತನಿಖೆಯಲ್ಲಿ ಗುಪ್ತಚರ ಸಂಸ್ಥೆಯ ಜತೆ ಕೈಜೋಡಿಸಿದೆ. ಸೈಬರ್ ಕ್ರೈಂ ವಿಭಾಗವೂ ಆತನ ಫೋನ್, ಸಿಂ, ಕರೆ ದಾಖಲೆಗಳನ್ನು ಪರಿಶೀಲಿಸುತ್ತಿದೆ.