ಸಾರಾಂಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಆಯೋಜನೆ ವಿಚಾರದಲ್ಲಿ ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿ ಕಾಲ್ತುಳಿತ ನಡೆಯಲು ಕಾರಣವಾಗಿ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಮುಂದೆ ಬಲವಾಗಿ ವಾದಿಸಿದೆ.
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಆಯೋಜನೆ ವಿಚಾರದಲ್ಲಿ ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿ ಕಾಲ್ತುಳಿತ ನಡೆಯಲು ಕಾರಣವಾಗಿ ಸರ್ಕಾರಕ್ಕೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಈ ಕಾರಣದಿಂದಲೇ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಯಿತು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಮುಂದೆ ಬಲವಾಗಿ ವಾದಿಸಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಕರ್ತವ್ಯಲೋಪ ಆರೋಪದಡಿ ಬೆಂಗಳೂರು ನಗರ ಹೆಚ್ಚುವರಿ ಪೊಲಿಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿದ ಆದೇಶ ರದ್ದುಪಡಿಸಿದ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ)ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳನ್ನು ಅಮಾನತುಪಡಿಸಿದ ತನ್ನ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಿತು.
ಅನುಮತಿ ನಿರಾಕರಿಸಬೇಕಿತ್ತು:
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಆರ್‌ಸಿಬಿ ಸಂಭ್ರಮಾಚರಣೆಗೆ ಅನುಮತಿ ಕೇಳಿದ ದಿನವೇ ಪೊಲೀಸರು ಅನುಮತಿ ನಿರಾಕರಿಸಬೇಕಿತ್ತು. ಕಾರ್ಯಕ್ರಮ ನಡೆಸದಂತೆ ನಿರ್ಬಂಧಿಸುವ ಅಧಿಕಾರ ಹೊಂದಿದ್ದರು. ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಆದರೆ, ಆರ್‌ಸಿಬಿ ವಿಜಯೋತ್ಸವ ಆಯೋಜನೆಗೆ ಪೊಲೀಸ್ ಆಯುಕ್ತರಾದಿಯಾಗಿ ಬಂದೋಬಸ್ತ್ ಒದಗಿಸಲು ಬೆಳಗ್ಗೆ ಸಿದ್ಧತೆ ಆರಂಭಿಸಿದ್ದರು. ಬಂದೋಬಸ್ತ್ ಮಾಡಲು ಜು.4ರಂದು ಬೆಳಗ್ಗೆ 11.30ಕ್ಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆರ್‌ಸಿಬಿ ಆಟಗಾರರ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರೆ ನಿರ್ಬಂಧಕಾಜ್ಞೆ ಏಕೆ ವಿಧಿಸಲಿಲ್ಲ ಎಂದು ಪ್ರಶ್ನಿಸಿದರು.
ಪೊಲೀಸರು ಕರ್ತವ್ಯಲೋಪ ಎಸಗಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆ ವರದಿ ನೀಡಿತ್ತು. ಆ ವರದಿ ಆಧರಿಸಿ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ವರದಿಯನ್ನು ಹೈಕೋರ್ಟ್ ಗಮನಿಸಿದರೆ ಸರ್ಕಾರದ ಕ್ರಮ ಸರಿಯೆನ್ನಿಸಬಹುದು. ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಸರ್ಕಾರ ಸಹ ಒಪ್ಪಿದೆ. ಅವರ ಮೇಲೆ ಘಟನೆಗೆ ಸಂಬಂಧಿಸಿ ಆ.3ರೊಳಗೆ ಆರೋಪ ನಿಗದಿಪಡಿಸುವಂತೆ ಸೂಚಿಸಿದೆ. ಪೊಲೀಸರು ಅನುಮತಿ ನಿರಾಕರಿಸಿದ್ದರೆ, ಅದನ್ನು ಪ್ರಶ್ನಿಸಿ ಆಯೋಜಕರು ಕೋರ್ಟ್ ಗೆ ಬರುತ್ತಿದ್ದರು. ಆಗ ಕೋರ್ಟ್ ಸೂಕ್ತ ನಿರ್ಬಂಧ ವಿಧಿಸಿ ತೀರ್ಮಾನ ಕೈಗೊಳ್ಳುತ್ತಿತ್ತು. ಪೊಲೀಸರು ಕಾಲ್ತುಳಿತ ಪ್ರಕರಣ ತಪ್ಪಿಸುವ ಅವಕಾಶವಿತ್ತು. ಆದರೆ, ಪೊಲೀಸರು ಸಮರ್ಪಕವಾಗಿ ಕರ್ತವ್ಯ ನಿಭಾಯಿಸಲಿಲ್ಲ. ಆರ್‌ಸಿಬಿ ಸೇವಕರಂತೆ ವರ್ತಿಸಿ, ಕಾಲ್ತುಳಿತ ದುರ್ಘಟನೆ ನಡೆಯಲು ಕಾರಣವಾಗಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಅದರಿಂದಲೇ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಬಲವಾಗಿ ವಾದಿಸಿದರು.
ರದ್ದುಪಡಿಸಲು ಅರ್ಹ:
ವಿಕಾಸ್ ಕುಮಾರ್ ಸಹ ವಿಜಯೋತ್ಸವ ಕಾರ್ಯಕ್ರಮಕ್ಕೆ ಬಂದೋಬಸ್ತ್ ಒದಗಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಹೆಚ್ವುವರಿ ದಾಖಲೆಗಳನ್ನು ಸಿಎಟಿ ಪರಿಗಣಿಸಿಲ್ಲ. ಹಾಗಾಗಿ, ಸಿಎಟಿ ಆದೇಶ ದೋಷಪೂರಿತವಾಗಿದ್ದು, ರದ್ದುಪಡಿಸಲು ಅರ್ಹವಾಗಿದೆ ಎಂದು ಆಕ್ಷೇಪಿಸಿದರು.
ಆರ್‌ಸಿಬಿ ಪರ ಹಿರಿಯ ವಕೀಲರು, ವಿಕಾಸ್ ಕುಮಾರ್ ಅವರ ಅರ್ಜಿಯಲ್ಲಿ ಆರ್‌ಸಿಬಿ ಪ್ರತಿವಾದಿಯಾಗಿರಲಿಲ್ಲ. ಹೀಗಿದ್ದರೂ ಸಿಎಟಿ ತನ್ನ ತೀರ್ಪಿನಲ್ಲಿ ಕಾರ್ಯಕ್ರಮಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಜನ ಸೇರಲು ಆರ್‌ಸಿಬಿಯೇ ಕಾರಣವೆಂದು ಉಲ್ಲೇಖಿಸಿದೆ. ಆ ಅಭಿಪ್ರಾಯದ ಭಾಗ ರದ್ದುಪಡಿಸಬೇಕು ಎಂದು ಕೋರಿದರು.
ವಿಕಾಸ್ ಕುಮಾರ್ ಪರ ವಕೀಲರು, ಪೊಲೀಸರು ಜನರನ್ನು ನಿಯಂತ್ರಿಸಲು ತಮ್ಮ ಕಕ್ಷಿದಾರರು ಎಲ್ಲ ಪ್ರಯತ್ನ ಮಾಡಿದ್ದಾರೆ. ಆದರೂ ಅವರ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಿ ಸೇವೆಯಿಂದ ಅಮಾನತು ಮಾಡಿರುವುದು ಸರಿಯಲ್ಲ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರ್‌ಸಿಬಿ ತಂಡದ ಗೆಲುವು ಕಾಲ್ತುಳಿತ ಉಂಟಾಗಿ ಜನ ಸಾವಿಗೀಡಾಗಲು ಕಾರಣವಾಗುತ್ತದೆ ಎಂಬುದಾಗಿ ಯಾರೂ ನಿರೀಕ್ಷಿರಲಿಲ್ಲ ಎಂದು ನುಡಿದು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಪೊಲೀಸರದ್ದೇ ತಪ್ಪು: ನ್ಯಾ। ಕುನ್ಹಾ ವರದಿ
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು, ವರದಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ.ವರದಿಯಲ್ಲೇನಿದೆ?1. ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಾಗಿ ಘೋಷಿಸಿದ್ದು ಹಾಗೂ ಆಯೋಜಕರ ರೀತಿ ಪೊಲೀಸರು ವರ್ತಿಸಿದ್ದೂ ದುರಂತಕ್ಕೆ ಕಾರಣ
2. ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ, ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಬೇಜವಾಬ್ದಾರಿಯಿಂದಲೇ ದುರ್ಘಟನೆ.3. ಯಾವುದೇ ಪೂರ್ವಾನುಮತಿ ಪಡೆಯದೇ ಸಂಭ್ರಮಾಚರಣೆ ಘೋಷಣೆ. ದೊಡ್ಡ ಪ್ರಮಾಣದ ಜನರು ಸೇರುವುದಕ್ಕೆ ಕ್ರೀಡಾಂಗಣ ಅಸುರಕ್ಷಿತವಾಗಿತ್ತು4. ವಿಜಯೋತ್ಸವ ಕುರಿತಂತೆ ಆರ್‌ಸಿಬಿ ಮಾಡಿದ ಟ್ವೀಟ್ ಅನ್ನು ವಿರಾಟ್ ಕೊಹ್ಲಿ ಅವರು ಸಹ ಶೇರ್ ಮಾಡಿದ್ದು ಸಹ ಹೆಚ್ಚು ಜನರು ಬರಲು ಕಾರಣವಾಯಿತು.5. ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಶಂಕರ್, ಮಾಜಿ ಖಜಾಂಚಿ ಜೈರಾಮ್, ಆರ್‌ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್‌ಎ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ವೆಂಕಟ ವರ್ಧನ್, ಉಪಾಧ್ಯಕ್ಷ ಸುನೀಲ್ ಮಾಥುರ್, ಎಡಿಜಿಪಿ ಬಿ. ದಯಾನಂದ್, ಐಜಿ ವಿಕಾಸ್ ಕುಮಾರ್ ವಿಕಾಸ್, ಡಿಸಿಪಿ ಶೇಖರ್ ಎಚ್.ತೆಕ್ಕಣ್ಣನವರ್, ಎಸಿಪಿ ಸಿ. ಬಾಲಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.