ಛತ್ತೀಸ್‌ಗಡದಲ್ಲಿ ಕೇರಳ ಕ್ರೈಸ್ತ ಸನ್ಯಾಸಿನಿಯರಿಗೆ ಜಾಮೀನು

| N/A | Published : Aug 03 2025, 06:25 AM IST

Kerala Nuns

ಸಾರಾಂಶ

ಮಾನವ ಕಳ್ಳಸಾಗಣೆ, ಬಲವಂತದ ಮತಾಂತರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕೇರಳದ ಇಬ್ಬರು ಸನ್ಯಾಸಿನಿಯರು ಸೇರಿದಂತೆ ಮೂವರಿಗೆ ಛತ್ತೀಸ್‌ಗಡದ ಬಿಲಾಸ್ಪುರ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ

ಬಿಲಾಸ್ಪುರ: ಮಾನವ ಕಳ್ಳಸಾಗಣೆ, ಬಲವಂತದ ಮತಾಂತರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕೇರಳದ ಇಬ್ಬರು ಸನ್ಯಾಸಿನಿಯರು ಸೇರಿದಂತೆ ಮೂವರಿಗೆ ಛತ್ತೀಸ್‌ಗಡದ ಬಿಲಾಸ್ಪುರ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ. ಇದಾದ ಕೆಲವೇ ಗಂಟೆಗಳಲ್ಲಿ ಎಲ್ಲರೂ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಅವರನ್ನು ಖುದ್ದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ ಚಂದ್ರಶೇಖರ್‌ ಸೇರಿ ಅನೇಕರು ಜೈಲಿನ ಹೊರಗೆ ಸ್ವಾಗತಿಸಿದ್ದಾರೆ.

ಈ ಬಂಧನವು ಕೇರಳ ಹಾಗೂ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್‌ ಮತ್ತು ಸಿಪಿಎಂ ಪಕ್ಷಗಳು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಛತ್ತೀಸ್‌ಗಢ ಬಿಜೆಪಿ ಆಡಳಿತದ ರಾಜ್ಯವಾಗಿದ್ದರೂ ದಾದಿಯರ ಬಂಧನಕ್ಕೆ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಆಕ್ಷೇಪಿಸಿದ್ದರು. ‘ಇದು ತಪ್ಪು ಕಲ್ಪನೆಯಿಂದ ಆದ ಬಂಧನ’ ಎಂದಿದ್ದರು.

ಇದರ ನಡುವೆ ಜಾಮೀನು ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ್ದ ಎನ್‌ಐಎ ಕೋರ್ಟ್‌ ನ್ಯಾಯಾಧೀಶ ಸಿರಾಜುದ್ದೀನ್‌ ಖುರೇಶಿ ಅವರು, ‘ಪಾಸ್‌ಪೋರ್ಟ್‌ ಒಪ್ಪಿಸಬೇಕು ಮತ್ತು ಯಾವುದೇ ಕಾರಣಕ್ಕೂ ದೇಶಬಿಟ್ಟು ಹೋಗುವ ಪ್ರಯತ್ನ ಮಾಡಬಾರದು’ ಎಂಬ ಷರತ್ತು ವಿಧಿಸಿ ಜಾಮೀನು ನೀಡಿದೆ.

ಪ್ರಕರಣ ಏನು?:

ಕೇರಳದ ಇಬ್ಬರು ಕ್ರೈಸ್ತ ಕ್ಯಾಥೋಲಿಕ್‌ ನನ್‌ಗಳಾದ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್‌ ಹಾಗೂ ಇನ್ನೋರ್ವ ಮಹಿಳೆ ಸುಕಮನ್‌ ಮಂಡಾವಿ ಅವರನ್ನು ಸರ್ಕಾರಿ ರೈಲ್ವೆ ಪೊಲೀಸರು ಛತ್ತೀಸ್‌ಗಡದ ರೈಲ್ವೆ ನಿಲ್ದಾಣದಲ್ಲಿ ಜು.25ರಂದು ಬಂಧಿಸಿದ್ದರು. ನಾರಾಯಣಪುರದ ಯುವತಿಯೊಬ್ಬಳನ್ನು ಬಲವಂತವಾಗಿ ಮತಾಂತರ ಮತ್ತು ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಬಜರಂಗದಳ ಕಾರ್ಯಕರ್ತರು ಮಾಡಿದ್ದ ಆರೋಪದ ಮೇರೆಗೆ ಈ ಬಂಧನ ನಡೆದಿತ್ತು.

ಕ್ರೈಸ್ತ ಸನ್ಯಾಸಿನಿಗೆ ಜಾಮೀನು

ಮಂಜೂರು: ಆರ್‌ಸಿ ಸ್ವಾಗತ

ತಿರುವನಂತಪುರಂ: ಛತ್ತೀಸ್‌ಗಢದಲ್ಲಿ ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರ ಆರೋಪದಲ್ಲಿ ಬಂಧಿತರಾಗಿದ್ದ ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯದ ತೀರ್ಪನ್ನು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ಸ್ವಾಗತಿಸಿದ್ದಾರೆ.

ಸನ್ಯಾಸಿನಿಯರನ್ನು ಬಿಲಾಸಪುರ ಜೈಲಿನ ಹೊರಗೆ ಉಪಸ್ಥಿತರಿದ್ದು ಸ್ವಾಗತಿಸಿದ ರಾಜೀವ್‌, ಅನೇಕ ದಿನಗಳ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ.

ಈ ನಡುವೆ ಸನ್ಯಾಸಿನಿಯರ ಬಿಡುಗಡೆಗೆ ಸಹಕರಿಸಿದ ರಾಜೀವ್‌ ಅವರಿಗೆ ಭಾರತದ ಕ್ಯಾಥೋಲಿಕ್ ಬಿಷಪ್‌ ಸಮ್ಮೇಳನದ (ಸಿಬಿಸಿಐ) ಉಪ ಪ್ರಧಾನ ಕಾರ್ಯದರ್ಶಿ ಫಾ. ಮ್ಯಾಥ್ಯೂ ಕೊಯಿಕಲ್ ಧನ್ಯವಾದ ತಿಳಿಸಿದ್ದು, ‘ಅವರ ಮಧ್ಯಸ್ಥಿಕೆಗಳು ಈ ಪ್ರಕರಣವನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಎಲ್ಲರೂ ರಾಜಕೀಯ ಪಕ್ಷ, ಧರ್ಮವನ್ನು ಮರೆತು ನಮ್ಮೊಂದಿಗೆ ನಿಂತರು’ ಎಂದು ಹೇಳಿದ್ದಾರೆ. ಇದರ ವಿಡಿಯೋವನ್ನು ಆರ್‌ಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ.

Read more Articles on