ಎಟಿಎಂ ಕೇಂದ್ರದಲ್ಲೇ ಗ್ರಾಹಕರೊಬ್ಬರ ಗಮನವನ್ನು ಬೇರೆಡೆ ಸೆಳೆದು 2.50 ಲಕ್ಷ ರು. ಹಣವನ್ನು ಎಗರಿಸಿರುವ ಖದೀಮರು

| N/A | Published : Mar 11 2025, 12:51 AM IST / Updated: Mar 11 2025, 04:09 AM IST

ಸಾರಾಂಶ

ಎಟಿಎಂ ಕೇಂದ್ರದಲ್ಲೇ ಗ್ರಾಹಕರೊಬ್ಬರ ಗಮನವನ್ನು ಬೇರೆಡೆ ಸೆಳೆದ ಖದೀಮರು 2.50 ಲಕ್ಷ ರು. ಹಣವನ್ನು ಎಗರಿಸಿರುವ ಘಟನೆ ನಾಗಮಂಗಲ ಟೌನ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ನಾಗಮಂಗಲ : ಎಟಿಎಂ ಕೇಂದ್ರದಲ್ಲೇ ಗ್ರಾಹಕರೊಬ್ಬರ ಗಮನವನ್ನು ಬೇರೆಡೆ ಸೆಳೆದ ಖದೀಮರು 2.50 ಲಕ್ಷ ರು. ಹಣವನ್ನು ಎಗರಿಸಿರುವ ಘಟನೆ ಟೌನ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಹುಳ್ಳೇಏನಹಳ್ಳಿ ಗ್ರಾಮದ ಚಿಕ್ಕಮಾಯಣ್ಣ ಎಂಬುವರೇ ಹಣ ಕಳೆದುಕೊಂಡವರಾಗಿದ್ದಾರೆ. ಮಾ.7ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನ ಎಂಟಿಎಂಗೆ ಹಣ ಡ್ರಾ ಮಾಡಲು ಚಿಕ್ಕಮಾಯಣ್ಣ ತೆರಳಿದ್ದಾರೆ. ಆ ಸಮಯದಲ್ಲಿ 4 ಮಂದಿ ಎಟಿಎಂ ಕೊಠಡಿ ಪ್ರವೇಶಿಸಿದರು. ಎಟಿಎಂನಿಂದ ಹಣ ಬಾರದಿದ್ದಾಗ ಕೇಂದ್ರದಲ್ಲಿದ್ದವರು ಇನ್ನೊಂದು ಸಲ ಹಾಕಿನೋಡಿ ಎಂದು ತಿಳಿಸಿದರು. ಅದೇ ಸಮಯಕ್ಕೆ ಅಲ್ಲಿದ್ದವರೇ ಚಿಕ್ಕಮಾಯಣ್ಣನನ್ನು ಮಾತನಾಡಿಸಿದರು. ಆಗ ಅವರು ಅಲ್ಲಂದಹಣ ತೆಗೆಯದೆ ಹೊರಟುಹೋದರು. ಆ ವೇಳೆಗೆ ಅವರ ಕಾರ್ಡನ್ನೇ ಹೋಲುವ ಬೇರೊಂದು ಕಾರ್ಡ್‌ನ್ನು ಎಟಿಎಂ ಮೆಷಿನಲ್ಲಿಟ್ಟಿದ್ದರು ಎನ್ನಲಾಗಿದೆ.

ಸ್ವಲ್ಪ ಸಮಯದ ನಂತರರ ಚಿಕ್ಕ ಮಾಯಣ್ಣನವರ ಮೊಬೈಲ್‌ ನಂಬರ್‌ 8971966932ಕ್ಕೆ ಬ್ಯಾಂಕ್‌ ಖಾತೆಯಿಂದ 2 ಬಾರಿ 75 ಸಾವಿರ ರು., 1 ಬಾರಿ 50 ಸಾವಿರ ರು., 5 ಬಾರಿ ತಲಾ 10 ಸಾವಿರ ರು. ಹಣ ಡ್ರಾ ಆಗಿರುವ ಮೆಸೇಜ್‌ ಬಂದವು. ಒಟ್ಟು 2.50 ಲಕ್ಷ ರು. ಹಣ ಡ್ರಾ ಮಾಡಿದ್ದಾರೆ. ಇದರಿಂದ ಗಾಬರಿಯಾದ ಚಿಕ್ಕಮಾಯಣ್ಣ ಅವರು ತಮ್ಮ ಬಳಿ ಇದ್ದ ಎಟಿಎಂ ಕಾರ್ಡ್‌ನ್ನು ಪರಿಶೀಲಿಸಿದಾಗ ಅವರ ಎಟಿಎಂ ಕಾರ್ಡ್‌ನ್ನೇ ಹೋಲುವ ಬೇರೊಂದು ಎಟಿಎಂ ಕಾರ್ಡ್‌ನ್ನು ಮೆಷಿನ್‌ಗೆ ಹಾಕಿರುವುದು ಕಂಡುಬಂದಿತು. ನಾಗಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

ಕೆ.ಆರ್.ಪೇಟೆ: ಪ್ರತ್ಯೇಕ ಪ್ರಕರಣದಲ್ಲಿ ಯುವತಿ ಮತ್ತು ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿಕ್ಕೇರಿ ಗ್ರಾಮದ ಸೋನು (20) ಯುವತಿಯು ಕಾಣೆಯಾಗಿದ್ದು, 165 ಸೇ.ಮೀ ಎತ್ತರ, ಗೋಧಿ ಬಣ್ಣ, ದುಂಡು ಮುಖ, ಮನೆಯಿಂದ ಹೊರಡುವಾಗ ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದರು.

ಇದೇ ಗ್ರಾಮದ ಸಿದ್ಧರಾಜಚಾರಿ (68) ಕಾಣೆಯಾಗಿದ್ದು, ಸಾಧಾರಣ ಬಣ್ಣ, ಕೋಲು ಮುಖ, ಬಿಳಿ ಮತ್ತು ಕಪ್ಪು ಮಿಶ್ರಿತ ತಲೆಗೂದಲು, ಸಾಧಾರಣ ಮೈಕಟ್ಟು ಮನೆಯಿಂದ ಹೊರಡುವಾಗ ಬಿಳಿ ಮಿಶ್ರಿತ ನೀಲಿ ಅಂಗಿ ಬಿಳಿ ಪಂಚೆ ಧರಿಸಿದ್ದಾರೆ.

ಇಬ್ಬರ ಸುಳಿವು ಸಿಕ್ಕಲ್ಲಿ ದೂ.ಸಂ:08232-224500/0821-2445168/ಮೊ-9480804861 ಅನ್ನು ಸಂಪರ್ಕಿಸಬಹುದು ಎಂದು ಠಾಣೆ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.