ಸಾರಾಂಶ
ತನ್ನನ್ನು ಕ್ಷಮಿಸುವಂತೆ ತಾಯಿಗೆ ಪತ್ರ ಬರೆದಿಟ್ಟು ಜಾನಪದ ಗಾಯಕಿಯೊಬ್ಬರ 14 ವರ್ಷದ ಪುತ್ರನೊಬ್ಬ ಆತ್ಮಹ*ಗೆ ಶರಣಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಬೆಂಗಳೂರು : ತನ್ನನ್ನು ಕ್ಷಮಿಸುವಂತೆ ತಾಯಿಗೆ ಪತ್ರ ಬರೆದಿಟ್ಟು ಜಾನಪದ ಗಾಯಕಿಯೊಬ್ಬರ 14 ವರ್ಷದ ಪುತ್ರನೊಬ್ಬ ಆತ್ಮಹ*ಗೆ ಶರಣಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬನಶಂಕರಿ 3ನೇ ಹಂತದ ನಿವಾಸಿ ಗಾಯಕಿ ಸವಿತಾ ಹಾಗೂ ಗಣೇಶ್ ಪ್ರಸಾದ್ ದಂಪತಿ ಪುತ್ರ ಜಿ. ಗಾಂಧಾರ್ (14) ಮೃತ ದುರ್ದೈವಿ. ಮನೆಯ ಕೊಠಡಿಯಲ್ಲಿ ಭಾನುವಾರ ರಾತ್ರಿ ಗಾಂಧಾರ್ ನೇ* ಬಿಗಿದುಕೊಂಡು ಆತ್ಮಹ* ಮಾಡಿಕೊಂಡಿದ್ದು, ಮೃತನ ಕೋಣೆಗೆ ಬೆಳಗ್ಗೆ ಆತನ ಸೋದರ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಈ ಆತ್ಮಹ*ಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳೂರು ಮೂಲದ ಕದ್ರಿಯ ಕೀ ಬೋರ್ಡ್ ವಾದಕ ಗಣೇಶ್ ಪ್ರಸಾದ್ ಅವರು ಬನಶಂಕರಿಯ 3ನೇ ಹಂತದಲ್ಲಿ ತಮ್ಮ ಪತ್ನಿ ಗಾಯಕಿ ಸವಿತಾ, ಮಕ್ಕಳಾದ ಬಂಸತ್ .ಜಿ.ಪ್ರಸಾದ್ ಹಾಗೂ ಗಾಂಧಾರ್.ಜಿ.ಪ್ರಸಾದ್ ಜತೆ ನೆಲೆಸಿದ್ದರು. ಉತ್ತರಹಳ್ಳಿ ಮುಖ್ಯರಸ್ತೆಯ ಖಾಸಗಿ ಶಾಲೆಯಲ್ಲಿ ಅವರ ಕಿರಿಯ ಪುತ್ರ ಗಾಂಧಾರ್ 7ನೇ ತರಗತಿಯಲ್ಲಿ ಓದುತ್ತಿದ್ದ.
ಮನೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ತಂದೆ-ಮಕ್ಕಳು ಊಟ ಮಾಡಿದ್ದರು. ಬಳಿಕ ತಮ್ಮ ರೂಮ್‌ಗಳಿಗೆ ಇಬ್ಬರು ಮಕ್ಕಳು ಮಲಗಲು ತೆರಳಿದ್ದಾರೆ. ಆಗ ತನ್ನ ರೂಮ್‌ನಲ್ಲಿ ಗಿಟಾರ್ ನೇತು ಹಾಕುತ್ತಿದ್ದ ಹುಕ್ಕಿಗೆ ಟವಲ್‌ನಿಂದ ನೇಣು ಬಿಗಿದುಕೊಂಡು ಗಾಂಧಾರ್ ಆತ್ಮಹ* ಮಾಡಿಕೊಂಡಿದ್ದಾನೆ. ಬಳಿಕ ಸೋಮವಾರ ನಸುಕಿನ 5ಗಂಟೆಗೆ ತನ್ನ ಸೋದರನನ್ನು ನಿದ್ರೆಯಿಂದ ಏಳಿಸಲು ಮೃತನ ಅಣ್ಣ ತೆರಳಿದ್ದಾನೆ. ಆಗ ನೇಣಿನ ಕುಣಿಕೆಯಲ್ಲಿ ಮೃತದೇಹ ಕಂಡು ಆತ ಕಿರುಚಿದ್ದಾನೆ. ಈ ಚೀರಾಟ ಕೇಳಿ ಆತಂಕದಿಂದ ಕಿರಿಯ ಮಗನ ಕೋಣೆಗೆ ಮೃತನ ತಂದೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನ ಮನೆಯಲ್ಲಿ ಮರಣ ಪತ್ರ:
ಮೃತನ ಕೋಣೆಯಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ಆತ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದು, ತಾಯಿಗೆ ಗಾಂಧಾರ್ ಕ್ಷಮೆ ಕೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನನ್ನ ಪ್ರೀತಿಯ ಕುಟುಂಬದವರೇ ಪತ್ರ ಓದುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ. ನನ್ನನ್ನು ಯಾರೂ ತಪ್ಪು ತಿಳಿದುಕೊಳ್ಳಬೇಡಿ. ನನಗೆ ಗೊತ್ತು ನಿಮಗೆ ಸಹಿಸಲಾರದಷ್ಟು ನೋವಾಗಿದೆ. ನಾನು ಈ ತೀರ್ಮಾನ ಮಾಡುತ್ತಿರುವುದು ಈ ಮನೆಯನ್ನು ಮತ್ತಷ್ಟು ಒಳ್ಳೆಯ ಸ್ಥಳವಾಗಿಸುವುದು. ನನಗೆ ಗೊತ್ತು ನಿಮಗೆ ಕೋಪ, ನೋವು, ಹುಚ್ಚು ಹಾಗೂ ಕಿರಿಕಿರಿ ಹೀಗೆ ಸಾಕಷ್ಟು ನೋವು ಕೊಟ್ಟು ಕಾಡಿದ್ದೇನೆ. ನಿಮಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಿ ಬಿಡಿ. ನನ್ನೆಲ್ಲ ಪಾಪ ಹಾಗೂ ತಪ್ಪು ಕೆಲಸಗಳನ್ನು ಮನ್ನಿಸಿ. ನಾನು 14 ವರ್ಷಗಳು ತುಂಬಾ ಖುಷಿಯಿಂದ ಕಳೆದಿದ್ದೇನೆ. ನಾನು ಸ್ವರ್ಗದಲ್ಲಿ ಇನ್ನು ಖುಷಿಯಾಗಿದ್ದೇನೆ. ನನ್ನ ಸ್ನೇಹಿತರಿಗೆ ಎಲ್ಲರಿಗೂ ಹೇಳಿ ನಾನು ಸಂತೋಷವಾಗಿದ್ದೇನೆ ಎಂದು. ಗುಡ್ ಬಾಯ್ ಅಮ್ಮ’ ಎಂದು ಮೃತ ಗಾಂಧಾರ್ ಉಲ್ಲೇಖಿಸಿದ್ದಾನೆ.
ಇಂದು ತಾಯಿ ಆಗಮನ:
ಸಂಗೀತಾ ಕಾರ್ಯಕ್ರಮದ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಮೃತನ ತಾಯಿ ಸವಿತಾ ಅವರಿಗೆ ಮಗನ ಆತ್ಮಹತ್ಯೆ ವಿಚಾರ ತಿಳಿಸಲಾಗಿದೆ. ನಗರಕ್ಕೆ ಮಂಗಳವಾರ ಅವರು ಮರಳಿದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.