ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಮೂಡುಬಿದಿರೆಯ ಹುಟ್ಟೂರು, ಕುಟುಂಬದಿಂದ ದೂರವಾಗಿದ್ದ ಮನೆಯ ಹಿರಿಮಗ 36 ವರ್ಷಗಳ ಬಳಿಕ ಮರಳಿದ ಅಪರೂಪದ ವಿದ್ಯಮಾನ ನಡೆದಿದೆ. ಇರುವೈಲು ಗ್ರಾಮದ ಕೊನ್ನೆಪದವು ಸಮೀಪದ ಮಧು ವನಗಿರಿಯ ಚಂದ್ರಶೇಖರ್ (ಚಂದ್ರು) ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. 7 ತಿಂಗಳು ಪತ್ರ ಮುಖೇನ ಮನೆಯವರ ಸಂಪರ್ಕದಲ್ಲಿದ್ದು, ಬಳಿಕ ಸಂಪರ್ಕ ಕಳೆದುಕೊಂಡು ಮುಂಬೈನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಮಾನಸಿಕ ಸಮಸ್ಯೆಗೆ ತುತ್ತಾದ ಚಂದ್ರು, ಕುಟುಂಬಸ್ಥರ ಮರೆತು ದೇವಸ್ಥಾನ, ಮಂದಿರ, ಊರು ಕೇರಿ ತಿರುಗಾಡಿಕೊಂಡು 10 ವರ್ಷ ಕಳೆದರು. 25 ವರ್ಷಗಳ ಹಿಂದೆ ಚಂದ್ರಶೇಖರ್ ಪರಿಸ್ಥಿತಿ ಕಂಡ ಬಾಲು ಕಾಂಬ್ಳೆ ಎಂಬುವರ ಮರಾಠಿ ಕುಟುಂಬ, ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ತಕ್ಕಮಟ್ಟಿಗೆ ಮಾನಸಿಕ ಆರೋಗ್ಯ ಸರಿಯಾದಾಗ ಹೋಟೆಲ್‌ನಲ್ಲಿ ನೌಕರಿಗೆ ಸೇರಿಕೊಂಡರು. ಕೆಲಸದ ಜತೆ ರಾತ್ರಿ ಶಾಲೆಗೆ ಹೋಗಿ ಕಲಿಕೆಯನ್ನೂ ಆರಂಭಿಸಿದರು. ಇತ್ತ ಇರುವೈಲಿನಲ್ಲಿರುವ ಕುಟುಂಬ ಸದಸ್ಯರು ಆತನ ಹುಡುಕಾಟದಲ್ಲಿದ್ದರು.ಸುಳಿವು ಕೊಟ್ಟ ದೈವ: ಗೋಪಿ ಎಂಬವರ ಮೂವರು ಪುತ್ರರು, ಇಬ್ಬರು ಪುತ್ರಿಯರಲ್ಲಿ ಚಂದ್ರ ಹಿರಿಯವರು. ಕುಟುಂಬ ಸದಸ್ಯನನ್ನು ಕಳೆದುಕೊಂಡ ಮನೆಮಂದಿ ಆತನ ಪತ್ತೆಗಾಗಿ ಹಲವು ಕಡೆ ಹರಕೆ ಹೊತ್ತಿದ್ದರು. ಕೆಲ ತಿಂಗಳ ಹಿಂದೆ ನಡೆದ ಮಂತ್ರದೇವತೆ ದರ್ಶನದ ವೇಳೆ ‘ಮನೆ ಮಗ ಬದುಕಿದ್ದಾನೆ. ಮುಂದೆ ನಡೆಯುವ ದರ್ಶನದಲ್ಲಿ ದೈವದ ಚಾಕರಿ ಹಿರಿಯ ಮಗನಿಂದಲೇ ನಡೆಯಬೇಕು’ ಎಂಬ ಅಭಯ ನೀಡಿತ್ತು. ಆ ಬಳಿಕ ಇರುವೈಲು ಸಮೀಪದ ಕುಪ್ಪೆಟ್ಟುವಿನಲ್ಲಿ ನಡೆದ ಬ್ರಹ್ಮ ಕಲಶ ಸಂದರ್ಭ ಮುಂಬೈಯಲ್ಲಿ ನೆಲೆಸಿರುವ ಊರವರೊಬ್ಬರು ಚಂದ್ರಶೇಖರ್ ಸುಳಿವು ನೀಡಿದ್ದರು. ಅವರನ್ನು ಸಂಪರ್ಕಿಸಲು ಊರವರು, ಮುಂಬೈ ಯಲ್ಲಿ ನೆಲೆಸಿರುವ ಪರಿಚಯಸ್ಥರು ಪ್ರಯತ್ನಿಸಿದರು. ಆ ವೇಳೆ ಆಶ್ರಯ ನೀಡಿದ ಕುಟುಂಬದವರ ದೂ. ಸಂಖ್ಯೆ ಲಭಿಸಿ ಅವರನ್ನು ಸಂಪರ್ಕಿಸಲಾಯಿತು. ಇದೀಗ, ಮೇ 29ರಂದು ನಡೆದ ದೈವ ದರ್ಶನಕ್ಕೆ ಮೂರು ದಿನ ಮೊದಲು ಚಂದ್ರ ಮನೆ ಸೇರಿದ್ದಾರೆ. ಅವರ ಮಾನಸಿಕ ಆರೋಗ್ಯದಲ್ಲಿ ತುಸು ವ್ಯತ್ಯಾಸಗಳಿದ್ದು, ಮನೆಗೆ ಬಂದ ಬಳಿಕ ಗುಣಮುಖರಾಗುತ್ತಿದ್ದಾರೆ.
...........................ಮಾನಸಿಕ ಅನಾರೋಗ್ಯದ ಕಾರಣ, ಕುಟುಂಬದವರಿಂದ ದೂರವಾಗಿದ್ದೆ. ಮನೆಯವರ ಪ್ರಾರ್ಥನೆ, ದೈವ-ದೇವರ ಕೃಪೆಯಿಂದ ಮತ್ತೆ ಕುಟುಂಬ ಸೇರಿದ್ದೇನೆ. ನನ್ನನ್ನು ಮನೆ ಮಗನಂತೆ ಸಾಕಿದ ಬಾಲು ಕಾಂಬ್ಳೆ ಕುಟುಂಬಕ್ಕೆ ಋಣಿ. ಸ್ವಲ್ಪ ಕಾಲ ಮತ್ತೆ ಮುಂಬೈಯಲ್ಲಿ ದುಡಿಯುತ್ತೇನೆ. ಇನ್ನುಮುಂದೆ ಮನೆಯಲ್ಲಿ ನಡೆಯುವ ದೈವ-ದೇವರ ಕೆಲಸ, ಸಮಾರಂಭಗಳಿಗೆ ತಪ್ಪದೆ ಬರುತ್ತೇನೆ. ಮನೆಯ ಸಂಪರ್ಕದಲ್ಲಿರುತ್ತೇನೆ.
- ಚಂದ್ರಶೇಖರ್, ಮನೆಗೆ ಮರಳಿದವರು.