ಸಾರಾಂಶ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಹಿರಿಯ ಮಗ, ನಟ ಎಂ.ಕೆ.ಮುತ್ತು (77) ಅವರು ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸಾವನ್ನಪ್ಪಿದ್ದು, ಇವರ ಅಗಲುವಿಕೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಂಬನಿ ಮಿಡಿದಿದ್ದಾರೆ.
1970ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ನಟನೆ ಜತೆಗೆ ಹಿನ್ನೆಲೆ ಗಾಯನದಲ್ಲಿಯೂ ಹೆಸರುಗಳಿಸಿದ್ದರು.
1948ರಲ್ಲಿ ಜನಿಸಿದ ಇವರಿಗೆ ಕರುಣಾನಿಧಿ ಅವರು ತಮ್ಮ ತಂದೆ ಮುತುವೇಲ್ ಅವರ ನೆನಪಿಗಾಗಿ ಮುತ್ತು ಎಂದು ಹೆಸರಿಟ್ಟಿದ್ದರು. ಇವರ ಅಗಲುವಿಕೆಯ ಸುದ್ದಿ ಆಘಾತ ನೀಡಿದೆ ಎಂದು ಇವರ ಸೋದರ, ಸಿಎಂ ಎಂ.ಕೆ.ಸ್ಟಾಲಿನ್ ಅವರು ಕಂಬನಿ ಮಿಡಿದಿದ್ದಾರೆ.
ಮುತ್ತು ಅವರ ಸೋದರಿ, ಸಂಸದೆ ಕನಿಮೋಳಿ ಅವರು ಸಹ ಸಂತಾಪ ಸೂಚಿಸಿದ್ದಾರೆ.
ಕರೆಂಟಿಲ್ಲದ ಕಡೆ ವಿದ್ಯುತ್ ಫ್ರೀ: ಬಿಹಾರ ಬಗ್ಗೆ ಯುಪಿ ಬಿಜೆಪಿ ಸಚಿವ ವ್ಯಂಗ್ಯ
ಲಖನೌ: ‘ಕರೆಂಟಿಲ್ಲದ ಕಡೆ ವಿದ್ಯುತ್ ಕೂಡ ಉಚಿತವಾಗಿರುತ್ತದೆ’ ಎಂದು ಬಿಹಾರ ಜೆಡಿಯು-ಬಿಜೆಪಿ ಸರ್ಕಾರದ 125 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಬಗ್ಗೆ ಉತ್ತರ ಪ್ರದೇಶ ಬಿಜೆಪಿ ಸಚಿವ ಎ.ಕೆ. ಶರ್ಮಾ ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆ ಖುದ್ದು ಬಿಜೆಪಿಗೆ ಮಜುಗರ ಉಂಟು ಮಾಡಿದೆ.
ಶನಿವಾರ ಸುದ್ದಿಗಾರರು ಅವರಿಗೆ , ‘ಉತ್ತರ ಪ್ರದೇಶದಲ್ಲೂ 125 ಯೂನಿಟ ಉಚಿತ ವಿದ್ಯುತ್ ಸರದಿ ಬರುತ್ತದೆಯೇ?’ ಎಂದು ಕೇಳಿದರು. ಈ ಪ್ರಶ್ನೆಗೆ, ಯೋಗಿ ಸಂಪುಟದ ಹಿರಿಯ ಸಚಿವರೂ ಆಗಿರುವ ಶರ್ಮಾ ಉತ್ತರಿಸಿ, ’ಬಿಹಾರದಲ್ಲಿ ಇದು ಉಚಿತವಾಗಿದೆ. ಏಕೆಂದರೆ ಅಲ್ಲಿ ವಿದ್ಯುತ್ ಲಭ್ಯವಿಲ್ಲ. ವಿದ್ಯುತ್ ಲಭ್ಯವಿಲ್ಲದಿದ್ದರೆ, ಅದನ್ನು ಉಚಿತ ಎಂದು ಕರೆಯಲಾಗುತ್ತದೆ. ವಿದ್ಯುತ್ ಲಭ್ಯವಿಲ್ಲದೇ ಇದ್ದರೆ ಬಿಲ್ ಕೂಡ ನೀಡಲ್ಲ. ಆದರೆ ನಾವು ಉತ್ತರ ಪ್ರದೇಶದಲ್ಲಿ ವಿದ್ಯುತ್ ಒದಗಿಸುತ್ತಿದ್ದೇವೆ. ಹೀಗಾಗಿ ಇಂಥ ಪ್ರಶ್ನೆ ಇಲ್ಲಿ ಉದ್ಭವಿಸದು’ ಎಂದು ಹೇಳಿದರು.
‘ಕಿಂಗ್’ ಶೂಟಿಂಗ್ ವೇಳೆ ನಟ ಶಾರುಖ್‌ಗೆ ಗಾಯ: 1 ತಿಂಗಳು ವಿಶ್ರಾಂತಿ
ಮುಂಬೈ: ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ‘ಕಿಂಗ್’ ಚಿತ್ರದ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡಿದ್ದು, ಅವರಿಗೆ 1 ತಿಂಗಳು ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾರುಖ್ ಅವರು ಮುಂಬೈನ ಗೋಲ್ಡನ್ ಟೊಬಾಗೋ ಸ್ಟೂಡಿಯೋದಲ್ಲಿ ಸ್ಟಂಟ್‌ಗಳನ್ನು ಮಾಡುತ್ತಿದ್ದರು. ಈ ವೇಳೆ ಅವರಿಗೆ ಪೆಟ್ಟಾಗಿದೆ. ಚಿಕಿತ್ಸೆ ನಿಮಿತ್ತ ಶಾರುಖ್ ಅವರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅವರಿಗೆ 1 ತಿಂಗಳು ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಚಿತ್ರೀಕರಣವನ್ನು 2 ತಿಂಗಳು ಮುಂದೂಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವುದೇ ಗಂಭೀರ ತೊಂದರೆಗಳು ಆಗಿಲ್ಲ. ಮಸಲ್ ಇಂಜುರಿ ಮಾತ್ರ ಆಗಿದೆ ಎನ್ನಲಾಗಿದೆ.
ರೈಲಿನಲ್ಲಿನ ತಿಂಡಿ, ವಸ್ತುಗಳ ವ್ಯಾಪಾರಿಗಳಿಗೆ ಇನ್ಮುಂದೆ ಗುರುತಿನ ಚೀಟಿ
ನವದೆಹಲಿ: ರೈಲಿನಲ್ಲಿ ಅನಧಿಕೃತ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರೈಲ್ವೆ ಇಲಾಖೆ, ಮಾರಾಟಗಾರರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಿದೆ. ಈ ನಿಯಮ ಎಲ್ಲ ವಲಯಗಳಲ್ಲಿ ಜಾರಿಗೆ ಬರಬೇಕು ಎಂದು ಆದೇಶಿಸಿದೆ.
ರೈಲ್ವೆ ವಾಣಿಜ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ‘ರೈಲ್ವೆ ಆಡಳಿತ ಅಥವಾ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ಇದರಲ್ಲಿ ವ್ಯಾಪಾರಿಯ ಹೆಸರು, ಆಧಾರ್ ಸಂಖ್ಯೆ, ವೈದ್ಯಕೀಯ ಪ್ರಮಾಣ ಪತ್ರ, ಪರವಾನಗಿ ಪಡೆದ ಸಂಸ್ಥೆಯ ವಿವರ ಸೇರಿದಂತೆ ಹಲವು ಅಂಶಗಳು ಒಳಗೊಂಡಿರಬೇಕು. ಗುರುತಿನ ಚೀಟಿ ಹೊಂದಿಲ್ಲದಿದ್ದರೆ ಮಾರಾಟಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಕೆಲಸ ಬಿಟ್ಟರೆ, ಗುರುತಿನ ಚೀಟಿಯನ್ನು ಪರವಾನಗಿದಾರರಿಗೆ ಒಪ್ಪಿಸಬೇಕು’ ಎಂದಿದೆ.
ವಾಲ್‌ಸ್ಟ್ರೀಟ್ ಜರ್ನಲ್, ರಾಯಿಟರ್ಸ್‌ಗೆ ಪೈಲಟ್ ಒಕ್ಕೂಟ ನೋಟಿಸ್
ನವದೆಹಲಿ: ‘ಜೂ.12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್‌ಇಂಡಿಯಾ ವಿಮಾನ ದುರಂತಕ್ಕೆ ಹಿರಿಯ ಪೈಲಟ್ ಕಾರಣ. ಆತನೇ ಇಂಧನ ಸ್ವಿಚ್ ಆಫ್ ಮಾಡಿರಬಹುದು ಅಥವಾ ಕಾಕ್‌ಪಿಟ್‌ನಲ್ಲಿ ಉಂಟಾದ ಗೊಂದಲವೇ ದುರಂತಕ್ಕೆ ಕಾರಣ’ ಎನ್ನುವರ್ಥದ ವರದಿ ಪ್ರಕಟಿಸಿದ್ದ ಅಮೆರಿಕದ ದಿ ವಾಲ್‌ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಇದೀಗ ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐಪಿ) ಕಾನೂನು ನೋಟಿಸ್ ನೀಡಿದೆ.
ಇಂಥ ಆಧಾರರಹಿತ ಅಂಶಗಳನ್ನು ಇಟ್ಟುಕೊಂಡು ಪ್ರಕಟಿಸಿದ ವರದಿಗಾಗಿ ಪತ್ರಿಕೆ ಹಾಗೂ ಸುದ್ದಿ ಸಂಸ್ಥೆ ಕ್ಷಮೆಯಾಚಿಸಬೇಕು ಎಂದೂ ಆಗ್ರಹಿಸಿದೆ.ಇದೇವೇಳೆ, ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (ಎನ್‌ಟಿಎಸ್‌ಬಿ) ಅಧ್ಯಕ್ಷೆ ಜೆನ್ನಿಫರ್ ಹೋಮೆಂಡಿ ಕೂಡ ಪತ್ರಿಕಾ ವರದಿಗಳು, ತನಿಖೆ ಇನ್ನೂ ನಡೆದಿರುವಾಗಲೇ ಇಂಥ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದಿದ್ದಾರೆ.
ದಿ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ಮತ್ತು ರಾಯಿಟರ್ಸ್ ಸುದ್ದಿ ಸಂಸ್ಥೆ ಆಯ್ದ ಮತ್ತು ಆಧಾರರಹಿತ ವರದಿಯನ್ನು ಪ್ರಕಟಿಸಿದೆ. ದುರ್ಘಟನೆ ಕುರಿತು ತನಿಖೆ ನಡೆಯುತ್ತಿರುವಾಗ ಇಂಥ ವರದಿ ಪ್ರಕಟಿಸುವುದು ಬೇಜಾಬಾಬ್ದಾರಿಯ ನಡೆ. ಮಾಧ್ಯಮಗಳು ಪತ್ರಿಕೋದ್ಯಮದ ಮೌಲ್ಯಗಳ ಸಮಗ್ರತೆಯನ್ನು ಎತ್ತಿಹಿಡಿಯಬೇಕು ಮತ್ತು ಸಾರ್ವಜನಿಕರ ದಾರಿತಪ್ಪಿಸುವಂಥ ಮಾಹಿತಿ ಹರಡುವುದನ್ನು ತಡೆಯಬೇಕು ಎಂದು ಎಫ್‌ಐಪಿ ಒತ್ತಾಯಿಸಿದೆ.
ರಾಯಿಟರ್ಸ್ ಮತ್ತು ದಿ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ಬೇಜವಾಬ್ದಾರಿ ವರದಿಯಿಂದ ದುರ್ಘಟನೆಯಲ್ಲಿ ಮೃತ ಪೈಲಟ್‌ಗಳ ಗೌರವಕ್ಕೆ ಚ್ಯುತಿಬಂದಿದೆ. ಮೃತಪಟ್ಟವರು ತಮ್ಮ ಮೇಲಿನ ಆರೋಪ ಅಲ್ಲಗಳೆಯಲೂ ಆಗುವುದಿಲ್ಲ. ಇಂಥ ವರದಿಗಳು ಮೃತರ ಕುಟುಂಬಕ್ಕೆ ಅನಗತ್ಯ ಯಾತನೆ ನೀಡುವ ಜತೆಗೆ, ತೀವ್ರ ಒತ್ತಡ ಹಾಗೂ ಸಾರ್ವಜನಿಕ ಜವಾಬ್ದಾರಿಯಿಂದ ಕೆಲಸ ಮಾಡುವ ಪೈಲಟ್‌ಗಳ ನೈತಿಕತೆ ಕುಸಿಯುವಂತೆ ಮಾಡುತ್ತದೆ ಎಂದು ಕಾನೂನು ನೋಟಿಸ್‌ನಲ್ಲಿ ತಿಳಿಸಲಾಗಿದೆ.ಈ ದುರಂತ ಸಾರ್ವಜನಿಕ ಗಮನಸೆಳೆದಿದೆ. ಹೀಗಾಗಿ ಆಧಾರರಹಿತ ಅಂಶಗಳನ್ನಿಟ್ಟುಕೊಂಡು ಸಾರ್ವಜನಿಕರಲ್ಲಿ ಆತಂಕ ಅಥವಾ ಭಾರತೀಯ ವೈಮಾನಿಕ ಕ್ಷೇತ್ರದ ಸುರಕ್ಷತೆಯ ಕುರಿತು ಕಳವಳ ಹುಟ್ಟಿಸುವ ಸಮಯ ಇದಲ್ಲ. ತನಿಖೆ ಮುಗಿಯುವವರೆಗೆ ಊಹಾತ್ಮಕ ವರದಿಯಿಂದ ದೂರವಿರಿ ಎಂದು ಎಫ್ಐಪಿ ಆಗ್ರಹಿಸಿದೆ.ಏರ್‌ಇಂಡಿಯಾ ದುರಂತ ಕುರಿತು ಇತ್ತೀಚೆಗೆ ಏರ್‌ಕ್ರಾಫ್ಟ್ ಆ್ಯಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯುರೋ(ಎಎಐಬಿ) ಬಿಡುಗಡೆ ಮಾಡಿದ್ದ ಪ್ರಾಥಮಿಕ ವರದಿಯಲ್ಲಿ, ದುರ್ಘಟನೆಕ್ಕೀಡಾದ ವಿಮಾನದ ಇಂಧನ ಸ್ವಿಚ್ ಆಫ್ ಆಗಿತ್ತು. ಇದರ ಜತೆಗೆ ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್‌ಗೆ ನೀವು ಇಂಧನ ಸ್ವಿಚ್ ಆಫ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದು, ಅದಕ್ಕೆ ಮತ್ತೊಬ್ಬ ಪೈಲಟ್ ನಾನು ಆ ರೀತಿ ಮಾಡಿಲ್ಲ ಎಂದು ಹೇಳಿರುವುದು ಬ್ಲ್ಯಾಕ್‌ಬಾಕ್ಸ್‌ನಲ್ಲಿ ದಾಖಲಾಗಿರುವ ಸಂಭಾಷಣೆಯಲ್ಲಿ ದಾಖಲಾಗಿದೆ ಎಂದು ಹೇಳಲಾಗಿತ್ತು.