ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿರುವ ದಕ್ಷಿಣ ರಾಜ್ಯಗಳ ವಿಪಕ್ಷಗಳ ಸಿಎಂಗಳ ಪೈಕಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹಾಗೂ ತೆಲಂಗಾಣ ಸಿಎಂ ರೇವಂತ ರೆಡ್ಡಿ ಭಾಗಿಯಾದರು.
ಆದರೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ಭಾಗಿಯಾಗಿರಲಿಲ್ಲ.
ಕೇಂದ್ರದ ವಿರುದ್ಧ ತೊಡೆತಟ್ಟಿದ್ದರೂ ವಿಪಕ್ಷ ಸಿಎಂಗಳಾದ ಪಂಜಾಬ್‌ನ ಭಗವಂತ ಮಾನ್, ತಮಿಳುನಾಡಿನ ಸ್ಟಾಲಿನ್ ಹಾಗೂ ಜಾರ್ಖಂಡ್‌ನ ಹೇಮಂತ ಸೊರೇನ್ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಅನ್ಯೋನ್ಯತೆಯಿಂದ ಮಾತನಾಡಿದ್ದು ಗಮನ ಸೆಳೆಯಿತು.
ಈ ನಡುವೆ, ಸ್ಟಾಲಿನ್ ಅವರು, ‘ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ.50 ಪಾಲು ಸಿಗಬೇಕು. ಕೇಂದ್ರ ತಡೆಹಿಡಿದಿರುವ 2,200 ಕೋಟಿ ರು. ಶೈಕ್ಷಣಿಕ ನಿಧಿಯನ್ನು ಬಿಡುಗಡೆ ಮಾಬೇಕು’ ಎಂದು ಆಗ್ರಹಿಸಿದರು.
ನೀತಿ ಆಯೋಗ ‘ಅಯೋಗ್ಯ ಆಯೋಗ’: ಕಾಂಗ್ರೆಸ್ ಕಿಡಿ
ನವದೆಹಲಿ : ಮೋದಿ ಸರ್ಕಾರದ ವಿರುದ್ಧ ಮತ್ತೆ ತಿರುಗಿ ಬಿದ್ದಿರುವ ಪ್ರತಿಪಕ್ಷ ಕಾಂಗ್ರೆಸ್, ನೀತಿ ಆಯೋಗವನ್ನು ‘ಅಯೋಗ್ಯ ಆಯೋಗ’ ಎಂದು ಕರೆದಿದೆ. ಆಯೋಗದ ಸಭೆಯನ್ನು ಬೂಟಾಟಿಕೆ ಮತ್ತು ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನದ ಭಾಗ ಎಂದು ಕಿಡಿಕಾರಿದೆ.ಶನಿವಾರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಅಧಿಕಾರದಲ್ಲಿರುವವರು ತಮ್ಮ ದುರುದ್ದೇಶಪೂರಿತ ಹೇಳಿಕೆಗಳು ಮತ್ತು ಕೆಲಸಗಳ ಮೂಲಕ ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ತಮ್ಮ ನೀಚ ಕೃತ್ಯಗಳಿಗಾಗಿ ಸಂಸತ್ತು, ನ್ಯಾಯಾಂಗ, ವಿವಿಗಳು, ಮಾಧ್ಯಮಗಳು ಮತ್ತು ಸಾಂವಿಧಾನಿಕ ಹಾಗೂ ಶಾಸನಬದ್ಧ ಸಂಸ್ಥೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಯಾವ ರೀತಿಯ ವಿಕಸಿತ ಭಾರತ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.ಬಿಜೆಪಿ ತಿರುಗೇಟು:
ಜೈರಾಂ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ, ‘ನೀತಿ ಆಯೋಗವನ್ನು ಅಯೋಗ್ಯ ಎಂದಿರುವ ಜೈರಾಂ, ಇಂಥ ಹೇಳಿಕೆಗಳ ಮೂಲಕ ಕಾಂಗ್ರೆಸ್‌ಗೆ ಹಾನಿ ಮಾಡುವ ಗುರಿ ಹೊಂದಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಕರೆದ ಸಭೆಗೂ ರಮೇಶ್ ಆಕ್ಷೇಪ ಎತ್ತುತ್ತಿದ್ದಾರೆ’ ಎಂದು ಹೇಳಿದೆ.