ರೇಣುಕಾ ಕೊಲೆ ಕೇಸಲ್ಲಿ ಮೊದಲ ಬಾರಿಗೆ ಕೇಶವಮೂರ್ತಿ, ಕಾರ್ತಿಕ್‌, ನಿಖಿಲ್‌ಗೆ ಜಾಮೀನು

| Published : Sep 24 2024, 11:45 AM IST

DARSHAN GANG

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಬೆಂಗಳೂರಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ 17 ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.

ಬೆಂಗಳೂರು : ಮೊದಲ ಬಾರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯದಿಂದ ಸೋಮವಾರ ಜಾಮೀನು ಮಂಜೂರಾಗಿದೆ.

ಪ್ರಕರಣದಲ್ಲಿ 16ನೇ ಆರೋಪಿಯಾಗಿರುವ ಬೆಂಗಳೂರಿನ ಕೇಶವಮೂರ್ತಿಗೆ ಹೈಕೋರ್ಟ್‌, 15ನೇ ಆರೋಪಿ ಕಾರ್ತಿಕ್‌ ಅಲಿಯಾಸ್‌ ಕಪ್ಪೆ ಮತ್ತು 17ನೇ ಆರೋಪಿ ನಿಖಿಲ್‌ ನಾಯಕ್‌ಗೆ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಇದರೊಂದಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಮಂದಿ ಆರೋಪಿಗಳ ಪೈಕಿ ಕೊನೆಯ ಮೂವರಿಗೆ ಜಾಮೀನು ದೊರೆತಂತಾಗಿದೆ.

ಶರಣಾಗಿದ್ದ ಆರೋಪಿಗಳು:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯನ್ನು ತಾವೇ ಮಾಡಿರುವುದಾಗಿ ಮೊದಲಿಗೆ ಪೊಲೀಸರ ಮುಂದೆ ಜೂ.10ರ ಸಂಜೆ 7 ಗಂಟೆಗೆ ಶರಣಾಗಿದ್ದ ನಾಲ್ವರ ಪೈಕಿ ಕೇಶವಮೂರ್ತಿ ಒಬ್ಬರಾಗಿದ್ದರು. ಈ ಮೂಲಕ ಕಾಮಾಕ್ಷಿ ಪಾಳ್ಯ ಪೊಲೀಸರನ್ನು ದಾರಿತಪ್ಪಿಸುವ, ಸಾಕ್ಷ್ಯವನ್ನು ಬಚ್ಚಿಡುವ ಆರೋಪ ಮಾಡಲಾಗಿದೆ. ನಾಲ್ಕನೇ ಆರೋಪಿ ರಾಘವೇಂದ್ರ, ಕಾರ್ತಿಕ್‌ ಮತ್ತು ನಿಖಿಲ್‌ ನಾಯಕ್‌ ಪೊಲೀಸರ ಮುಂದೆ ಸ್ವಯಂಪ್ರೇರಿತವಾಗಿ ಶರಣಾಗಿದ್ದರು.

ಈ ನಾಲ್ವರು ಆರೋಪಿಗಳು ಭಿನ್ನ ಹೇಳಿಕೆ ನೀಡಿದ ಕಾರಣ ಸಂಶಯಗೊಂಡಿದ್ದ ಪೊಲೀಸರು ವಿಚಾರಣೆಯನ್ನು ತೀವ್ರಗೊಳಸಿದಾಗ ಪವಿತ್ರಾಗೌಡ, ದರ್ಶನ್‌ ಹಾಗೂ ಇತರೆ ಆರೋಪಿಗಳ ಪಾತ್ರ ಬಹಿರಂಗಗೊಂಡಿತ್ತು.

ಇನ್ನೂ ಜಾಮೀನು ಕೋರಿ ಮೊದಲ ಆರೋಪಿ ಪವಿತ್ರಾಗೌಡ ಮತ್ತು ಎರಡನೇ ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕ್ರಮವಾಗಿ ಸೆ.25 ಮತ್ತು ಸೆ.27ಕ್ಕೆ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮುಂದೂಡಿದೆ. ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ತನಿಖಾಧಿಕಾರಿಗಳ (ಪ್ರಾಸಿಕ್ಯೂಷನ್‌) ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿಗಳ ವಿಚಾರಣೆ ಮುಂದೂಡಲಾಗಿದೆ.

ಐವರಿಂದ ಜಾಮೀನಿಗೆ ಅರ್ಜಿ:

ಮತ್ತೊಂದೆಡೆ ಪ್ರಕರಣದ 3ನೇ ಆರೋಪಿ ಪುಟ್ಟಸ್ವಾಮಿ, 4ನೇ ಆರೋಪಿ ಎನ್.ರಾಘವೇಂದ್ರ, 7ನೇ ಆರೋಪಿ ಅನುಕುಮಾರ್‌, 11ನೇ ಆರೋಪಿ ಆರ್‌ ನಾಗರಾಜು, 12ನೇ ಆರೋಪಿ ಎಂ.ಲಕ್ಷ್ಮಣ್‌ ಜಾಮೀನು ಕೋರಿದ್ದಾರೆ. ಇವರ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸೆಷನ್ಸ್‌ ನ್ಯಾಯಾಲಯ ತನಿಖಾಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

ಏಕೆ ಜಾಮೀನು ಮಂಜೂರು?

ಆರೋಪಿಗಳಾಗಿರುವ ಕೇಶವಮೂರ್ತಿ, ಕಾರ್ತಿಕ್‌ ಮತ್ತು ನಿಖಿಲ್‌ ವಿರುದ್ಧ ಸಾಕ್ಷ್ಯ ನಾಶ ಮತ್ತು ಅಪರಾಧಿಕ ಒಳಸಂಚು ಅಪರಾಧಕ್ಕೆ ಸಂಬಂಧಿಸಿದ ಆರೋಪಗಳಿವೆ. ಈ ಅಪರಾಧಗಳಿಗೆ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಾಲಯಗಳು ಆದೇಶದಲ್ಲಿ ಅಭಿಪ್ರಾಯಪಟ್ಟಿವೆ. ಈ ಮೂವರು ಆರೋಪಿಗಳ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದಂತೆ ವಿಸ್ತೃತ ಆದೇಶಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.