234 ರೌಡಿಗಳ ಮನೆ ಮೇಲೆ ಖಾಕಿ ದಾಳಿ

| Published : Mar 22 2024, 02:15 AM IST

ಸಾರಾಂಶ

ನಗರದ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಚುನಾವಣೆ ವೇಳೆ ಅಪರಾಧ ಕೃತ್ಯದಲ್ಲಿ ಭಾಗಿ ಆಗದಂತೆ ಪೊಲೀಸರ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ನಗರದ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜು ಅವರ ಮಾರ್ಗದರ್ಶನದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂಜಾನೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ರೌಡಿಗಳ ಮನೆಗಳನ್ನು ಶೋಧಿಸಿದ್ದಾರೆ. ಜಯನಗರ, ಜೆ.ಪಿನಗರ, ಬಸವನಗುಡಿ, ಸಿದ್ದಾಪುರ, ಬನಶಂಕರಿ, ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್‌, ಸುಬ್ರಹ್ಮಣ್ಯಪುರ, ಕೋಣನಕುಂಟೆ, ತಲಘಟ್ಟಪುರ, ವಿಶ್ವೇಶ್ವಪುರ, ಶಂಕರಪುರ, ಹನುಮಂತನಗರ, ಕೆಂಪೇಗೌಡನಗರ, ಗಿರಿನಗರ, ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 234 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರ ದಾಳಿ ವೇಳೆ 177 ಮಂದಿ ರೌಡಿಗಳು ಮನೆಗಳಲ್ಲೇ ಇದ್ದರೆ, 90 ರೌಡಿಗಳು ಮನೆಗಳಲ್ಲಿ ಇರಲಿಲ್ಲ. ಇನ್ನು 8 ಮಂದಿ ರೌಡಿಗಳು ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿರುವುದು ಕಂಡು ಬಂದಿದೆ. ರೌಡಿಗಳ ಮನೆ ಪರಿಶೀಲನೆ ವೇಳೆ ಕೆಲವರ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಯಾರ ಪರ-ವಿರುದ್ಧವೂ ಪ್ರಚಾರಕ್ಕೆ ಹೋಗಬಾರದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ರೌಡಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.