ಸಂತಾನ ಇಲ್ಲವೆಂದು ಮಕ್ಕಳಕಿಡ್ನಾಪ್‌ ಮಾಡಿದ ದಂಪತಿ!

| Published : Dec 14 2023, 02:00 AM IST

ಸಂತಾನ ಇಲ್ಲವೆಂದು ಮಕ್ಕಳಕಿಡ್ನಾಪ್‌ ಮಾಡಿದ ದಂಪತಿ!
Share this Article
  • FB
  • TW
  • Linkdin
  • Email

ಸಾರಾಂಶ

ಸಂತಾನವಿಲ್ಲವೆಂದು ಅಪರಿಚಿತರ ಮನೆ ಮುಂದೆ ಆಟವಾಡುತ್ತಿದ್ದ ಎಂಟು ತಿಂಗಳ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳನ್ನು ಅಪಹರಿಸಿ ಊರಿಗೆ ಪರಾರಿಯಾಗುತ್ತಿದ್ದ ದಂಪತಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮಗೆ ಸಂತಾನವಿಲ್ಲವೆಂದು ಅಪರಿಚಿತರ ಮನೆ ಮುಂದೆ ಆಟವಾಡುತ್ತಿದ್ದ ಎಂಟು ತಿಂಗಳ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳನ್ನು ಅಪಹರಿಸಿ ಊರಿಗೆ ಪರಾರಿಯಾಗುತ್ತಿದ್ದ ದಂಪತಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಹಾರ ಮೂಲದ ಪ್ರಮೀಳಾ ದೇವಿ ಹಾಗೂ ಬಲರಾಮ್ ಬಂಧಿತರಾಗಿದ್ದು, ಕೊಡಿಗೇಹಳ್ಳಿ ಸಮೀಪ ಮಂಗಳವಾರ ಬೆಳಗ್ಗೆ ಮಕ್ಕಳನ್ನು ಅಪಹರಿಸಿ ರೈಲಿನಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಯಶವಂತಪುರ ರೈಲ್ವೆ ನಿಲ್ದಾಣದ ಮಗುವಿನ ಅಕ್ರಂದನ ಕೇಳಿ ಶಂಕೆಗೊಂಡ ಪೊಲೀಸರು, ತಕ್ಷಣವೇ ದಂಪತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ರೈಲ್ವೆ ಪೊಲೀಸರು ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೂಲಿ ಅರಸಿ ನಗರಕ್ಕೆ ಬಂದಿದ್ದ ದಂಪತಿ:

ಕೆಲ ತಿಂಗಳ ಹಿಂದೆ ಕೂಲಿ ಅರಸಿ ನಗರಕ್ಕೆ ಬಂದಿದ್ದ ಬಲರಾಮ್ ದಂಪತಿ, ಕೊಡಿಗೇಹಳ್ಳಿ ಸಮೀಪ ನೆಲೆಸಿತ್ತು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಸಂತಾನವಿಲ್ಲದೆ ನೋವು ಅನುಭವಿಸುತ್ತಿದ್ದರು. ಆಗ ಅಪರಿಚಿತರ ಮಕ್ಕಳನ್ನು ಕಳವು ಮಾಡಿ ತಮ್ಮೂರಿಗೆ ಪರಾರಿಯಾಗಲು ಆರೋಪಿಗಳು ಸಂಚು ರೂಪಿಸಿದ್ದರು.

ಅಂತೆಯೇ ಕೊಡಿಗೇಹಳ್ಳಿ ಸಮೀಪ ಮನೆ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಹೆಣ್ಣು ಮಗು ಹಾಗೂ 8 ತಿಂಗಳ ಗಂಡು ಮಗವನ್ನು ಮಂಗಳವಾರ ಬೆಳಗ್ಗೆ 11.30ರಲ್ಲಿ ಅಪಹರಿಸಿದ ಆರೋಪಿಗಳು, ರಾತ್ರಿ ರೈಲಿನಲ್ಲಿ ಬಿಹಾರಕ್ಕೆ ಪರಾರಿಯಾಗಲು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆರೋಪಿಗಳು ತೆರಳಿದ್ದರು.

ಆ ವೇಳೆ ಪ್ರಮೀಳಾ ಮಡಿಲಿನಲ್ಲಿದ್ದ 8 ತಿಂಗಳ ಕಂದಮ್ಮ ಹಸಿವಿನಿಂದ ಅಕ್ರಂದನ ಮಾಡಿದೆ. ಮಗುವಿನ ರೋಧನ ಕೇಳಿ ಪ್ರಯಾಣಿಕರು ಜಮಾಯಿಸಿದ್ದಾರೆ. ಅದೇ ವೇಳೆ ಅಲ್ಲಿಗೆ ರೈಲ್ವೆ ಪೊಲೀಸರು ಧಾವಿಸಿದ್ದಾರೆ. ಆಗ ಪ್ರಮೀಳಾಳ ನಡವಳಿಕೆ ಮೇಲೆ ಶಂಕೆಗೊಂಡು ಪೊಲೀಸರು ವಿಚಾರಿಸಿದಾಗ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ.

ಅಷ್ಟರಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ನಾಪತ್ತೆಯಾಗಿದ್ದರಿಂದ ಕಂಗಲಾದ ಮಕ್ಕಳ ಪೋಷಕರು, ಕೂಡಲೇ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ದಂಪತಿ ಚಲನವಲನ ದೃಶ್ಯ ಪತ್ತೆಯಾಗಿದೆ.

ಈ ಸುಳಿವು ಆಧರಿಸಿ ಕೊಡಿಗೇಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದರು. ಆ ವೇಳೆಗೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಅಲ್ಲಿಗೆ ತೆರಳಿ ಮಕ್ಕಳನ್ನು ರಕ್ಷಿಸಿ ಪೋಷಕರ ಮಡಲಿಗೆ ಸುರಕ್ಷಿತವಾಗಿ ಸೇರಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.