ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ೨೫ ಸಾವಿರ ರು. ದಂಡ ವಿಧಿಸಿ ಇಲ್ಲಿನ ನಾಲ್ಕನೇ ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ೨೫ ಸಾವಿರ ರು. ದಂಡ ವಿಧಿಸಿ ಇಲ್ಲಿನ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು, ನರಗ್ಯಾತನಹಳ್ಳಿ ಗ್ರಾಮದ ಶಿವ ಅಲಿಯಾಸ್ ಕಪಿ ಅಲಿಯಾಸ್ ಶಿವಕುಮಾರ (೨೬) ಹಾಗೂ ಶ್ರೀರಂಗಪಟ್ಟಣ ತಾಲೂಕು, ಪಾಲಹಳ್ಳಿ ಗ್ರಾಮದ ರಾಜೇಶ್‌ (೩೨) ಶಿಕ್ಷೆಗೊಳಗಾದ ಅಪರಾಧಿಗಳು.

ಶಿವಕುಮಾರ ಮತ್ತು ರಾಜೇಶ್‌ ಚಿಂದಿಹಾಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹುಣಸೂರು ಮೂಲದ ನಿವಾಸಿ ಮೀನಾ ಎಂಬಾಕೆಯೂ ಚಿಂದಿ ಹಾಯುವ ಕೆಲಸ ಮಾಡಿಕೊಂಡಿದ್ದಳು. ಈಕೆಯನ್ನು ಪರಿಚಯ ಮಾಡಿಕೊಂಡ ಅಪರಾಧಿಗಳು ೨೦೨೦ರ ಮಾರ್ಚ್ ೩ರಂದು ರಾತ್ರಿ ೮ ಗಂಟೆ ಸಮಯದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸುವ ಉದ್ದೇಶದಿಂದ ಶ್ರೀರಂಗಪಟ್ಟಣದ ಎಂ.ಕೆ.ಆಯಿಲ್ ಫ್ಯಾಕ್ಟರಿ ಪಕ್ಕದ ಮೈಸೂರು-ಬೆಂಗಳೂರು ಹೆದ್ದಾರಿಯ ಬದಿಯ ವಾಟರ್ ಟ್ಯಾಂಕ್ ಹಿಂಭಾಗ ಕಂದಕದ ಬಳಿ ಕರೆದೊಯ್ದಿದ್ದಾರೆ. ನಂತರ ಆಕೆಯೊಂದಿಗೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ. ಆಕೆ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆತಂಕಗೊಂಡ ಅಪರಾಧಿಗಳು ಮೀನಾ ಧರಿಸಿದ್ದ ವೇಲ್‌ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಅಲ್ಲೇ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಮೀನಾಳ ತಲೆ ಮೇಲೆ ಎತ್ತಿಹಾಕಿ ಗುರುತು ಸಿಗದಂತೆ ಸಾಕ್ಷ್ಯನಾಶ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅಪರಾಧಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಯಾದವ್ ಅವರು, ಸಾಕ್ಷಾಧಾರಗಳು ಲಭ್ಯವಿಲ್ಲವೆಂದು ಬಿಡುಗಡೆಗೊಳಿಸಿದೆಯಾದರೂ, ಅಪರಾಧಿಗಳು ಮೀನಾಳನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಿರುವುದು ವಿಚಾರಣೆಯಿಂದ ದೃಢಪಟ್ಟಿರುವುದರಿಂದ ಅಪರಾಧಿಗಳಾದ ಶಿವಕುಮಾರ್, ರಾಜೇಶ್‌ಗೆ ಜೀವಾವಧಿ ಶಿಕ್ಷೆ ಮತ್ತು ತಲಾ ೨೫ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಕೆ.ನಾಗರಾಜು ಅವರು ವಾದ ಮಂಡಿಸಿದ್ದರು.ಜಮೀನಿನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಮದ್ದೂರು: ತಾಲೂಕಿನ ಕೊಪ್ಪ ಗ್ರಾಮದ ಭಾಗ್ಯಮ್ಮರ ಮನೆಯ ಹಿಂಭಾಗದ ಜಮೀನಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತನಿಗೆ ಸುಮಾರು 45 ವರ್ಷವಾಗಿದೆ. ನೀಲಿ ಬಣ್ಣದ ಶರ್ಟ್, ಕಪ್ಪು ಬಣ್ಣದ ನಿಕ್ಕರ್ ಅನ್ನು ಧರಿಸಿದ್ದಾರೆ. ಮೃತನ ಮಾಹಿತಿ ದೊರೆತಲ್ಲಿ ಮೊ- 9870432680, ಮೊ-8152843836 ಅನ್ನು ಸಂಪರ್ಕಿಸಬಹುದು ಎಂದು ತಾಲೂಕಿನ ಕೊಪ್ಪ ಪೊಲೀಸ್ ಠಾಣೆ ಸಬ್‌ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ನಾಲೆಯಲ್ಲಿ ವ್ಯಕ್ತಿ ಶವ ಪತ್ತೆ

ಮಳವಳ್ಳಿ: ತಾಲೂಕಿನ ಹೆಬ್ಬಕವಾಡಿ ಗ್ರಾಮದಿಂದ ಹಿಟ್ಟಿನಹಳ್ಳಿಕೊಪ್ಪಲು ಮಾರ್ಗವಾಗಿ ಮಳವಳ್ಳಿ ಕಡೆಗೆ ಹೋಗುವ ವಿಸಿ ನಾಲೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತನಿಗೆ ಸುಮಾರು 40ರಿಂದ 50 ವರ್ಷವಾಗಿದೆ. ಸುಮಾರು 170 ಸೆಂ.ಮೀ ಎತ್ತರ, ಕೆಂಪು ಬಣ್ಣದ ಪ್ಯಾಂಟ್, ಹಸಿರು ಬಣ್ಣದ ಅಂಡರ್ ವೇರ್ ಬಲಗೈಯಲ್ಲಿ ಕಪ್ಪು ಬಣ್ಣದ ಜೈ ಭಜರಂಗಿ ರೆಸ್ಟ್ ಬ್ಯಾಂಡ್ ಧರಿಸಿದ್ದಾರೆ. ಮೃತ ವಾರಸುದಾರರ ಮಾಹಿತಿ ದೊರೆತಲ್ಲಿ ಮೊ-9480804864 ಅನ್ನು ಸಂಪರ್ಕಿಸಬಹುದು ಎಂದು ತಾಲೂಕಿನ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.