ಸಾರಾಂಶ
ವಿದ್ಯುತ್ ಮಾರ್ಗದ ದುರಸ್ತಿಗಾಗಿ ಕಂಬವೇರಿದ್ದ ಚೆಸ್ಕಾಂನ ಲೈನ್ ಮ್ಯಾನ್‌ಗೆ ಇದ್ದಕ್ಕಿದ್ದಂತೆ ವಿದ್ಯುತ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಮೀಪದ ಮಳವಳ್ಳಿ-ಕೊಳ್ಳೇಗಾಲ ರಸ್ತೆಯ ರೊಟ್ಟಿಕಟ್ಟೆ ಬಳಿ ಶುಕ್ರವಾರ ಜರುಗಿದೆ.
ಮಳವಳ್ಳಿ : ವಿದ್ಯುತ್ ಮಾರ್ಗದ ದುರಸ್ತಿಗಾಗಿ ಕಂಬವೇರಿದ್ದ ಚೆಸ್ಕಾಂನ ಲೈನ್ ಮ್ಯಾನ್‌ಗೆ ಇದ್ದಕ್ಕಿದ್ದಂತೆ ವಿದ್ಯುತ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಮೀಪದ ಮಳವಳ್ಳಿ-ಕೊಳ್ಳೇಗಾಲ ರಸ್ತೆಯ ರೊಟ್ಟಿಕಟ್ಟೆ ಬಳಿ ಶುಕ್ರವಾರ ಜರುಗಿದೆ.
ತಾಲೂಕಿನ ಬಿಜಿಪುರ ಹೋಬಳಿಯ ಶಿವನಸಮುದ್ರದ (ಬ್ಲಫ್)ಗ್ರಾಮದ ನಿವಾಸಿ ಮೊಹಮ್ಮದ್ ಹರ್ಷದ್ ಅಲಿ (28) ಮೃತಪಟ್ಟ ದುರ್ದೈವಿ.
ತಾಲೂಕಿನ ಬೆಳಕವಾಡಿ ಶಾಖೆಯಲ್ಲಿ ಕಳೆದ 8 ವರ್ಷಗಳಿಂದ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಶುಕ್ರವಾರ ರಾಷ್ಟ್ರೀಯ ಹೆದ್ದಾರಿ 209 ಮಳವಳ್ಳಿ- ಕೊಳ್ಳೇಗಾಲ ರಸ್ತೆಯ ರೊಟ್ಟಿಕಟ್ಟೆಯ ಬಳಿ 11ಕೆವಿ ವಯರ್‌ನಲ್ಲಿ ಐಪಿ ಸೆಟ್‌ನಲ್ಲಿ ಓವರ್ ಲೋಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಳಕವಾಡಿ ಕಿರಿಯ ಎಂಜಿನಿಯರ್ ನಂದೀಶ್ ಆದೇಶದ ಮೇರೆಗೆ ವಿದ್ಯುತ್ ಕಂಬವೇರಿದ್ದ ಮಹಮ್ಮದ್ ಹರ್ಷದ್ ಆಲಿ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯದಲ್ಲಿ ತೊಡಗಿರುವಾಗಲೇ ಎಲ್‌ಸಿ ತೆಗೆದುಕೊಂಡಿದ್ದಾಗ್ಯೂ ಏಕಾಏಕಿ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬದಿಂದೆ.
ಮೃತದೇಹವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ತಂಡ:
ಲೈನ್ ಮ್ಯಾನ್ ಮೊಹಮದ್ ಹರ್ಷದ ಅಲಿ ಎಂಬುವರು ಮೃತಪಟ್ಟಿದ್ದಾರೆ ಎಂಬ ವಿಷಯ ತಿಳಿಯುತ್ತಿದಂತೆ ಅಧಿಕಾರಿಗಳಾದ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ, ಎಇಇ ಗಳಾಂದ ಪ್ರೇಮ್ ಕುಮಾರ್, ನಿತೀಶ್ ಕುಮಾರ್, ಪಿಎಸ್ಐ ಪ್ರಕಾಶ್.ಬಿ.ವಿ ರವರುಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಚೆಸ್ಕಾಂ ಜೆಇ ಮೇಲೆ ಆಕ್ರೋಶ:
ಲೈನ್ ಮ್ಯಾನ್ ಮೊಹಮದ್ ಹರ್ಷದ್ ಅಲಿ ಮೃತಪಟ್ಟ ವಿಷಯ ತಿಳಿಯುತಿದ್ದಂತೆ ಮುಸ್ಲಿಂ ಸಮುದಾಯದರು ಚೆಸ್ಕ್ ಕಚೇರಿಗೆ ಆಗಮಿಸಿ ಜೆಇ ನಂದೀಶ್ ಅವರನ್ನು ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಎಲ್‌ಸಿ ಪಡೆದಿದ್ದರೂ ಸಹ ಹೇಗೆ ವಿದ್ಯುತ್ ಬಂತು ನಿಮ್ಮ ನಿರ್ಲಕ್ಷದಿಂದಲೇ ಲೈನ್ ಮ್ಯಾನ್ ಪ್ರಾಣ ಹೋಗಿದೆ ಎಂದು ಪ್ರಶ್ನಿಸಿದಾಗಲೇ ಏಕಾಏಕಿ ಕಾರ್‌ನಲ್ಲಿ ಕುಳಿತು ಸಾರ್ವಜನಿಕರಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಬೆಳಕವಾಡಿ ಪೊಲೀಸ್ ಠಾಣೆ ಮುಂಭಾಗ ಕೆಲವು ಕಾಲ ಪ್ರತಿಭಟನೆ ನಡೆಸಿದರು. ಬಳಿಕ ಅಪಘಾತಕ್ಕೆ ಯತ್ನಿಸಿದ ಅಧಿಕಾರಿ ಮೇಲೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.
ಈ ಸಂಬಂಧ ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.