ಸಾರಾಂಶ
ಇತ್ತೀಚೆಗೆ ದಿಢೀರ್ ಕಾರ್ಯಾಚರಣೆ ವೇಳೆ ಮಧ್ಯಾಹ್ನದ ಸಮಯದಲ್ಲಿಯೇ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ತೀವ್ರ ತರಾಟೆಗೆ ತೆಗೆದುಕೊಂಡು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ದಿಢೀರ್ ಕಾರ್ಯಾಚರಣೆ ವೇಳೆ ಮಧ್ಯಾಹ್ನದ ಸಮಯದಲ್ಲಿಯೇ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ತೀವ್ರ ತರಾಟೆಗೆ ತೆಗೆದುಕೊಂಡು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬೀಗ ಹಾಕಿದ್ದ ಕಚೇರಿಗಳಿಗೆ ಸೀಲ್ ಮಾಡಿದ್ದರಿಂದ ಮಂಗಳವಾರ ಇಲಾಖೆಯ ಒಬ್ಬರು ಜಂಟಿ ನಿಯಂತ್ರಕರು, 6 ಸಹಾಯಕ ನಿಯಂತ್ರಕರು, 6 ನಿರೀಕ್ಷಕರು ಲೋಕಾಯುಕ್ತ ಕಚೇರಿಗೆ ಆಗಮಿಸಿ ಕಚೇರಿಗೆ ಬೀಗಹಾಕಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಈ ವೇಳೆ ಹೊರಗೆ ಹೋಗುವ ಮುನ್ನ ಹಾಜರಾತಿ ಪುಸ್ತಕದಲ್ಲಿಯೂ ಯಾವುದೇ ಮಾಹಿತಿ ಒದಗಿಸದಿರುವ ಅಧಿಕಾರಿಗಳ ನಡೆಯ ಬಗ್ಗೆ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದರು. ಲೋಕಾಯುಕ್ತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳು ತಡಬಡಿಸಿದ್ದಕ್ಕೆ ಮತ್ತಷ್ಟು ಗರಂ ಆದ ಲೋಕಾಯುಕ್ತರು, ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಯಾರೂ ಕರೆ ಸ್ವೀಕರಿಸದೆ ಸ್ವೀಚ್‌ಆಫ್ ಮಾಡಲಾಗಿತ್ತು ಎಂದು ತರಾಟೆಗೆ ತೆಗೆದುಕೊಂಡರು.
ಸಹಾಯಕ ನಿಯಂತ್ರಕರಾದ ಕೆ.ಸೀಮಾ ಮಗಿ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಕವರಿನಲ್ಲಿ 21 ಸಾವಿರ ರು. ನಗದು ಲಭ್ಯವಾಗಿದ್ದು, ಅದರ ಮೇಲೆ ವೈಆರ್‌ಎಸ್ ಪ್ಯೂಯಲ್ ಪಾರ್ಕ್ ಎಂಬುದಾಗಿ ಬರೆಯಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರ ಇಲ್ಲ. ರಜೆ ಮಂಜೂರು ಮಾಡಿಕೊಂಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕಚೇರಿಗಳಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಿರುವ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ ಎಂದು ಕಿಡಿಕಾರಿದರು.ಕ್ರಮ ಕೈಗೊಂಡ ಬಗ್ಗೆ ವಿವರಕ್ಕೆ ಸೂಚನೆ:
ಕಳೆದ 3 ತಿಂಗಳಿನಿಂದ ನಡೆಸಿರುವ ತಪಾಸಣೆಯ ವಿವರಗಳು, ಈ ವೇಳೆ ಕಂಡು ಬಂದ ನ್ಯೂನತೆಗಳು ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಬೇಕು. ಪೆಟ್ರೋಲ್ ಬಂಕ್‌ಗಳಲ್ಲಿನ ಮಾಪನ ಸಲಕರಣೆಗಳು ಸರಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ಕೈಗೊಂಡ ವಿವರ ಮತ್ತು ತಪಿತಸ್ಥರ ವಿರುದ್ಧ ಕೈಗೊಂಡ ವಿವರಗಳ ಬಗ್ಗೆ ವರದಿ ನೀಡಬೇಕು. ಸಿನಿಮಾ ಹಾಲ್, ಪಬ್, ಮಾಲ್, ಹೊಟೇಲ್‌ಗಳಲ್ಲಿ ಪ್ಯಾಕೆಡ್ ಆಹಾರ ಮತ್ತು ಪಾನೀಯಗಳ ಮೇಳೆ ನಿಗದಿಪಡಿಸಿದ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿದ ವಿವರಗಳ ವರದಿ ನೀಡುವಂತೆ ಸೂಚನೆ ನೀಡಿದರು.