ಸರಕು ಸಾಗಣೆ ಮಾಡಲು ₹20 ಲಕ್ಷ ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

| N/A | Published : Apr 25 2025, 01:49 AM IST / Updated: Apr 25 2025, 04:24 AM IST

ಸಾರಾಂಶ

ಸರಕು ಸಾಗಣೆ ಮಾಡಲು ₹20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

  ಬೆಂಗಳೂರು : ಸರಕು ಸಾಗಣೆ ಮಾಡಲು ₹20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ವಾಣಿಜ್ಯ ತೆರಿಗೆ ಪರಿವೀಕ್ಷಕ ಎಂ.ಆರ್‌.ನಿಜಾನಂದಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಖಾಸಗಿ ವ್ಯಕ್ತಿ ಮನೋಜ್‌ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಗರದ ನಾಗರಭಾವಿ ಬಳಿಯ ನಮ್ಮೂರ ತಿಂಡಿ ಹೊಟೇಲ್‌ ಬಳಿ ಮನೋಜ್‌ ಅವರಿಂದ ಆರೋಪಿ ₹20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಸರಕು ಸಾಗಾಣಿಕೆ ಕಂಪನಿಗಳ ಮಾಲೀಕರ ಕಡೆಯಿಂದ ಪ್ರತಿ ತಿಂಗಳು ಲಂಚದ ಹಣವನ್ನು ಪಡೆದುಕೊಂಡು, ದೆಹಲಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆದ್ದಾರಿ ಮಾರ್ಗವಾಗಿ ಪಾನ್ ಮಸಾಲವನ್ನು ಸಾಗಾಣಿಕೆ ಮಾಡುತ್ತಿರುವ ಪಾನ್ ಮಸಾಲ ಸರಕು ಸಾಗಾಣಿಕೆದಾರರಿಗೆ ಅಕ್ರಮವಾಗಿ ಸಾಗಾಣಿಕೆ ಮಾಡಲು ಅನುವು ಮಾಡಿಕೊಡುತ್ತಿದ್ದರು ಎಂದು ಹೇಳಿದ್ದಾರೆ.

ಇಂತಹ ಘಟನೆಗಳಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟ ಉಂಟು ಮಾಡುತ್ತಿದ್ದರು. ಕಾನೂನನ್ನು ಪಾಲಿಸದೆ ಖಾಸಗಿ ಕಂಪನಿ ಹಾಗೂ ಖಾಸಗಿ ಜನರಿಗೆ ಕಾನೂನು ಬಾಹಿರ ಲಾಭ ಮಾಡಿಕೊಡುವ ಸಲುವಾಗಿ ಲಂಚದ ಹಣವನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆಯನ್ನು ಮಾಡಲಾಗುತ್ತಿದ್ದು, ಸಾಗಾಣಿಕೆದಾರರ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಲು ಅನುಕೂಲವನ್ನು ಮಾಡಿಕೊಡಲಾಗುತ್ತಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದಿದ್ದಾರೆ.