ಸಾರಾಂಶ
ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳೂರು ವಿಭಾಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಯ ಠಾಣೆ ವತಿಯಿಂದ ಸಾರ್ವಜನಿಕ ಅಹವಾಲು ಹಾಗೂ ಕುಂದುಕೊರತೆ ಸ್ವೀಕಾರ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರುಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕರಿಸುವ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೇ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಫಲಕವನ್ನು ಕಡ್ಡಾಯ ಅಳವಡಿಸಬೇಕು. ಇಲ್ಲವಾದರೆ ಅದು ಅಧಿಕಾರಿಗಳ ಕರ್ತವ್ಯಲೋಪವಾಗುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹೇಳಿದ್ದಾರೆ.ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳೂರು ವಿಭಾಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಯ ಠಾಣೆ ವತಿಯಿಂದ ಸಾರ್ವಜನಿಕ ಅಹವಾಲು ಹಾಗೂ ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಅನುದಾನ ದುರುಪಯೋಗ, ಸರ್ಕಾರಿ ಸೌಲಭ್ಯ ಜನರಿಗೆ ಸಿಗದೇ ಇರುವ ಸಂದರ್ಭ ದೂರು ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರು.ಹಾಜರಾತಿ ಪುಸ್ತಕ, ಚಲನವಲನ ದಾಖಲಾತಿ, ಹಣದ ಮಾಹಿತಿ ಪುಸ್ತಕ ಸೇರಿ ವಿವಿಧ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಅರ್ಜಿ ಸ್ವೀಕರಿಸುವ ಕಾರ್ಯ ಮಾಡಬೇಕು ಮತ್ತು ಸರಿಯಾದ ಮಾಹಿತಿ ನೀಡಬೇಕು. ಕಡತಗಳ ವಿಲೇವಾ ತಡ ಮಾಡುವುದೂ ಲಂಚದ ಬೇಡಿಕೆಯಾಗುತ್ತದೆ. ಲೆಕ್ಕ ಬಡ್ತಿಗೆ, ಕಾಟಾಚಾರದ ಸಭೆ ನಡೆಸದೆ, ಸ್ಥಳದಲ್ಲೇ ಸಮಸ್ಯೆ ಬಗೆಹರಿಸಬೇಕು ಎಂದರು.ಕುಂದುಕೊರತೆ ಸಭೆಯಲ್ಲಿ ಅಧಿಕೃತ ನಮೂನೆಯಲ್ಲಿ ೨ ದೂರು ಹಾಗೂ ಅರ್ಜಿಯ ರೀತಿಯಲ್ಲಿ ೧೦ ದೂರು ಸೇರಿ ೧೨ದೂರುಗಳನ್ನು ಸಾರ್ವಜನಿಕರು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಡಾ. ಗಾನ ಪಿ. ಕುಮಾರ್, ಸುರೇಶ್, ಪೊಲೀಸ್ ನಿರೀಕ್ಷಕಿ ಭಾರತಿ, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪ ವಲಯ ಅರಣ್ಯಾಧಿಕಾರಿ ಕಿರಣ್, ನಗರ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮತ್ತಿತರರು ಇದ್ದರು.