ಸಾರಾಂಶ
ಬೆಂಗಳೂರು : ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗುರುವಾರ ರಾತ್ರಿ ಸುಮಾರು 10.30ಕ್ಕೆ ಆತನ ತಾಯಿ ಕೊಠಡಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಲಿಂಗರಾಜಪುರದ ಸತೀಶ್ ಕುಮಾರ್(25) ಮೃತ. ಸತೀಶ್‌ಗೆ ತಂದೆ ಇಲ್ಲ. ತಾಯಿ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ. ವಾಣಿಜ್ಯ ಪದವಿಧರನಾಗಿದ್ದ ಸತೀಶ್ ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ ಮನೆಯಲ್ಲಿ ಯಾರು ಇಲ್ಲದಾಗ ರೂಮ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ.
ಸತೀಶ್ ಪದವಿ ವ್ಯಾಸಂಗದ ವೇಳೆ ಸಹಪಾಠಿ ಯುವತಿಯನ್ನು ಪ್ರೀತಿಸುತ್ತಿದ್ದ. ವ್ಯಾಸಂಗ ಮುಗಿದ ಬಳಿಕ 2 ವರ್ಷಗಳಿಂದ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 1 ವರ್ಷದಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಯುವತಿ ಸತೀಶ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಯುವತಿ 4 ತಿಂಗಳ ಹಿಂದೆಯಷ್ಟೇ ಸತೀಶ್ ವಿರುದ್ಧ ಜೆ.ಬಿ.ನಗರ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡಿದ್ದಳು. ಆಗ ಸತೀಶ್‌ನನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ನಡುವೆ ಹೊಸ ವರ್ಷಕ್ಕೆ ಶುಭ ಕೋರಲು ಸತೀಶ್ ಕರೆ ಮಾಡಿದಾಗ ಆಕೆ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಸತೀಶ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಡೆತ್ ನೋಟ್ ಪತ್ತೆಯಾಗಿಲ್ಲ. ಬಾಣಸವಾಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.