ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಆಭರಣ ಕದ್ದ ಕೆಲಸದಾಕೆ ಬಂಧನ

| Published : Jun 25 2025, 01:18 AM IST

ಸಾರಾಂಶ

ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಶಿಕ್ಷಕಿ ಮನೆಯಲ್ಲಿ ಚಿನ್ನಾಭರಣ ಕದ್ದು ಮಹಿಳೆಯೊಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಶಿಕ್ಷಕಿ ಮನೆಯಲ್ಲಿ ಚಿನ್ನಾಭರಣ ಕದ್ದು ಮಹಿಳೆಯೊಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ರಾಗಿಗುಡ್ಡದ ನಿವಾಸಿ ಶಾಂತಿ ಅಲಿಯಾಸ್ ಶಾಂತಮ್ಮ ಬಂಧಿತರಾಗಿದ್ದು, ಆರೋಪಿಯಿಂದ ₹14.3 ಲಕ್ಷ ಮೌಲ್ಯದ 143 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜೆ.ಪಿ.ನಗರದ 2ನೇ ಹಂತದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಬಗ್ಗೆ ದೂರು ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಜೆ.ಪಿ.ನಗರ ಠಾಣೆ ಪೊಲೀಸರು, ಶಂಕೆ ಮೇರೆಗೆ ಮನೆ ಕೆಲಸದಾಳು ಶಾಂತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಹಲವು ವರ್ಷಗಳಿಂದ ಜೆ.ಪಿ.ನಗರದ 2ನೇ ಹಂತದಲ್ಲಿ ಶಿಕ್ಷಕಿ ಆಯೇಷಾ ಕುಟುಂಬ ನೆಲೆಸಿದ್ದು, ಇವರ ಮನೆಯಲ್ಲಿ ಶಾಂತಿ ಕೆಲಸಕ್ಕಿದ್ದಳು. ಮನೆಯೊಡತಿಗೆ ಗೊತ್ತಾಗದಂತೆ 4 ಚಿನ್ನದ ಬಳೆಗಳು ಹಾಗೂ ಒಂದು ನೆಕ್ಲೇಸ್‌ ಅನ್ನು ಆಕೆ ಕಳವು ಮಾಡಿ ಮಾರಾಟ ಮಾಡಿದ್ದಳು. ಸಂಬಂಧಿಕರ ಮದುವೆಗೆ ಹೋಗಲು ಆಭರಣ ನೋಡಿದಾಗ ಆಯೇಷಾಗೆ ಕಳ್ಳತನದ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಜೆ.ಪಿ.ನಗರ ಠಾಣೆಗೆ ಮನೆ ಕೆಲಸದಾಳು ಮೇಲೆ ಶಂಕಿಸಿ ಅವರು ದೂರು ನೀಡಿದ್ದರು. ಅದರಂತೆ ಮನೆಕೆಲಸದಾಳು ಶಾಂತಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ ಕಳ್ಳತನ ಪತ್ತೆಯಾಗಿದೆ. ತನ್ನ ಮಗಳ ಮದುವೆಗೆ ₹5 ಲಕ್ಷ ಸಾಲ ಮಾಡಿಕೊಂಡಿದ್ದೆ. ಈ ಆರ್ಥಿಕ ಸಂಕಷ್ಟದಿಂದ ಸಾಲ ತೀರಿಸಲು ಮನೆಯೊಡತಿ ಆಭರಣ ಕಳವು ಮಾಡಿದ್ದಾಗಿ ಆಕೆ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.