ತಾನು ಕೆಲಸ ಮಾಡುವ ಮನೆಯಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳನ್ನು ಕಳವು

| Published : Sep 14 2024, 01:50 AM IST / Updated: Sep 14 2024, 06:34 AM IST

ಸಾರಾಂಶ

ಬೆಂಗಳೂರಿನಲ್ಲಿ ಮನೆಗೆಲಸದಾಕೆಯೊಬ್ಬಳು ಮಾಲೀಕರ ಮನೆಯಿಂದ ₹53.50 ಲಕ್ಷ ಮೌಲ್ಯದ ಚಿನ್ನ, ವಜ್ರ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯನ್ನು ವೈಟ್‌ಫೀಲ್ಡ್‌ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ತಾನು ಕೆಲಸ ಮಾಡುವ ಮನೆಯಲ್ಲಿ ಮಾಲೀಕರ ಕಣ್ಣು ತಪ್ಪಿಸಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಮನೆಗೆಲಸದ ಮಹಿಳೆಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಪಿಂಕಿ ದೇವಿ (30) ಬಂಧಿತೆ. ಆರೋಪಿತೆಯಿಂದ ₹53.50 ಲಕ್ಷ ಮೌಲ್ಯದ 13 ಗ್ರಾಂ ವಜ್ರ, 570 ಗ್ರಾಂ ಚಿನ್ನಾಭರಣಗಳು ಹಾಗೂ 470 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ವೈಟ್‌ಫೀಲ್ಡ್‌ನ ಚೈತನ್ಯ ಆರ್ಮಡಾಲ್‌ ವಿಲ್ಲಾ ನಿವಾಸಿ ಆಶಿತಾ ಬಿದ್ದಪ್ಪ ಮನೆಯಲ್ಲಿ ಕಳ್ಳತನವಾಗಿತ್ತು. ಇವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿತೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಕೊಡಗು ಮೂಲದ ಆಶಿತಾ ಬಿದ್ದಪ್ಪ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ವೈಟ್‌ಫೀಲ್ಡ್‌ನ ಚೈತನ್ಯ ಆರ್ಮಡಾಲ್‌ ವಿಲ್ಲಾದಲ್ಲಿ ಕುಟುಂಬದ ಜತೆಗೆ ನೆಲೆಸಿದ್ದಾರೆ. ಇವರ ಮನೆಯಲ್ಲಿ ಕಳೆದ ಆರು ತಿಂಗಳಿಂದ ಬಿಹಾರ ಮೂಲದ ಪಿಂಕಿ ದೇವಿ ಮನೆಗೆಲಸ ಮಾಡಿಕೊಂಡಿದ್ದಳು. ಒಂದು ತಿಂಗಳ ಹಿಂದೆ ಆಶಿತಾ ಅವರು ಮನೆಯ ಕೊಠಡಿಯ ಕಬೋರ್ಡ್‌ನಲ್ಲಿ ಚಿನ್ನಾಭರಣ ಇರಿಸಿದ್ದರು. ಸೆ.3ರಂದು ಕಬೋರ್ಡ್‌ ತೆರೆದು ನೋಡಿದಾಗ ಚಿನ್ನಾಭರಣ ಕಳವುವಾಗಿರುವುದು ಕಂಡು ಬಂದಿದೆ. ಕೊಠಡಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಮನೆಗೆಲಸದ ಪಿಂಕಿ ದೇವಿ ಕಬೋರ್ಡ್‌ ತೆರೆದು ಚಿನ್ನಾಭರಣ ಕಳವು ಮಾಡಿ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ಈ ಸಂಬಂಧ ಆಶಿತಾ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಕದ್ದ ಮಾಲು ಮನೆಯಲ್ಲೇ ಬಚ್ಚಿಟ್ಟಿದ್ದಳು!:

ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ವೈಟ್‌ಫೀಲ್ಡ್‌ನ ಗಾಂಧಿಪುರದ ಓಂ ಶಕ್ತಿ ದೇವಸ್ಥಾನದ ಸಮೀಪದ ಮನೆಯಲ್ಲಿ ವಾಸವಿದ್ದ ಪಿಂಕಿ ದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಈಕೆ ನೀಡಿದ ಮಾಹಿತಿ ಮೇರೆಗೆ ಮನೆಯಲ್ಲೇ ಇರಿಸಿದ್ದ ವಜ್ರ, ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳವು ಬಳಿಕವೂ ಕೆಲಸಕ್ಕೆ ಬರುತ್ತಿದ್ದ ಪಿಂಕಿದೇವಿ

ಆರೋಪಿ ಪಿಂಕಿ ದೇವಿ ತಾನು ಕೆಲಸ ಮಾಡುವ ಆಶಿತಾ ಬಿದ್ದಪ್ಪ ಅವರ ಮನೆಯಲ್ಲಿ ಕಳ್ಳತನ ಮಾಡಿದ ಬಳಿಕ ಚಿನ್ನಾಭರಣಗಳನ್ನು ತನ್ನ ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದಳು. ಶೀಘ್ರದಲ್ಲೇ ಅವುಗಳನ್ನು ಸ್ವಂತ ಊರು ಬಿಹಾರಕ್ಕೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿದ್ದಳು. ಕಳ್ಳತನ ಮಾಡಿದ ಬಳಿಕವೂ ಯಾವುದೇ ಅನುಮಾನ ಬಾರದಂತೆ ಪಿಂಕಿ ದೇವಿ, ದೂರುದಾರೆ ಆಶಿತಾ ಅವರ ಮನೆ ಕೆಲಸಕ್ಕೆ ನಿತ್ಯ ಬಂದು ಹೋಗುತ್ತಿದ್ದಳು. ಕಳವು ಕೃತ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಪಿಂಕಿ ದೇವಿ ಅರಿವಿಗೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.