ಸಾರಾಂಶ
ತನ್ನನ್ನು ಚಿಕ್ಕಂದಿನಿಂದ ಸಾಕಿ ಬೆಳೆಸಿ ಉತ್ತಮ ಶಿಕ್ಷಣ ಕೊಡಿಸಿದ ದೊಡ್ಡಮ್ಮನ ಮನೆಗೆ ಕನ್ನ ಹಾಕಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹24.51 ಲಕ್ಷ ಮೌಲ್ಯದ 258 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನನ್ನು ಚಿಕ್ಕಂದಿನಿಂದ ಸಾಕಿ ಬೆಳೆಸಿ ಉತ್ತಮ ಶಿಕ್ಷಣ ಕೊಡಿಸಿದ ದೊಡ್ಡಮ್ಮನ ಮನೆಗೆ ಕನ್ನ ಹಾಕಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹24.51 ಲಕ್ಷ ಮೌಲ್ಯದ 258 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.ಬನಶಂಕರಿ ನಿವಾಸ ಪ್ರಥಮ್ (26) ಬಂಧಿತ. ಬನಶಂಕರಿ 3ನೇ ಹಂತದ ನಿವಾಸಿ ಡಾ.ಶಾಂತಿ ಮನೆಯಲ್ಲಿ ಕಳೆದ ಜನವರಿಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಡಾ.ಶಾಂತಿ ಅವರ ತಂಗಿಗೆ ಮಕ್ಕಳು ಇರಲಿಲ್ಲ. ಹೀಗಾಗಿ ಪ್ರಥಮ್‌ನನ್ನು ದತ್ತು ತೆಗೆದುಕೊಂಡಿದ್ದು, ಚಿಕ್ಕಂದಿನಿಂದಲೂ ಮನೆಯಲ್ಲೇ ಇರಿಸಿಕೊಂಡು ಬೆಳೆಸಿ ಉತ್ತಮ ಶಿಕ್ಷಣ ಕೊಡಿಸಿದ್ದರು. ಬಿಬಿಎ ಪದವಿಧರನಾದ ಪ್ರಥಮ್ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಫೆ.18ರಂದು ಡಾ.ಶಾಂತಿ ಕುಟುಂಬದೊಂದಿಗೆ ಮುಂಬೈಗೆ ತೆರಳಿದ್ದರು. ಫೆ.2ರಂದು ಡಾ.ಶಾಂತಿ ಅವರು ಮುಂಬೈನಿಂದ ಮನೆಗೆ ವಾಪಾಸ್ ಆಗಿದ್ದರು. ಫೆ.20ರಂದು ಮನೆಯ ರೂಮ್‌ನಲ್ಲಿದ್ದ ಲಾಕರ್ ಪರಿಶೀಲಿಸಿದಾಗ 325 ಗ್ರಾಂ ಚಿನ್ನಾಭರಣ ಇರಲಿಲ್ಲ. ಈ ಸಂಬಂಧ ದೂರು ನೀಡಿದ್ದರು.ಚೆನ್ನೈನಿಂದ ಬಂದು ಕಳವು:
ಪೊಲೀಸರು ಮೊದಲಿಗೆ ಮನೆಗೆಲಸದವರನ್ನು ವಿಚಾರಣೆ ಮಾಡಿದಾಗ ಅವರು ಕಳ್ಳತನ ಮಾಡಿಲ್ಲ ಎಂಬುದು ಗೊತ್ತಾಗಿದೆ. ಡಾ.ಶಾಂತಿ ಅವರು ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿ ಪ್ರಥಮ್ ಚೆನ್ನೈನಿಂದ ಮನೆಗೆ ಬಂದು ಹೋಗಿರುವುದು ಗೊತ್ತಾಗಿದೆ. ಬಳಿಕ ಆತನ ಬಗ್ಗೆ ಅನುಮಾನಗೊಂಡು ವಿಚಾರಣೆ ಮಾಡಿದಾಗ ಆರಂಭದಲ್ಲಿ ತನಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾನೆ. ಆತನ ಗೊಂದಲದ ಹೇಳಿಕೆಗಳ ಬಗ್ಗೆ ಅನುಮಾನಗೊಂಡು ಆತನ ಬ್ಯಾಂಕ್ ಖಾತೆಯ ವಹಿವಾಟು ಪರಿಶೀಲಿಸಿದ್ದಾರೆ.ಈ ವೇಳೆ ಡಾ.ಶಾಂತಿ ಅವರ ಮನೆಯಲ್ಲಿ ಚಿನ್ನಾಭರಣ ಕಳುವಾದ 2 ದಿನಗಳಲ್ಲೇ ಪ್ರಥಮ್‌ನ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರು. ಹಣ ವಹಿವಾಟು ನಡೆದಿರುವುದು ಕಂಡು ಬಂದಿದೆ. ಆ ಹಣದ ಬಗ್ಗೆ ತೀವ್ರ ವಿಚಾರಣೆ ಮಾಡಿದಾಗ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣಗಳನ್ನು ಸ್ನೇಹಿತನ ಮುಖಾಂತರ ಪ್ಯಾಲೆಸ್ ಗುಟ್ಟಹಳ್ಳಿಯ 2 ಜುವೆಲರಿ ಅಂಗಡಿ ಹಾಗೂ ಚೆನ್ನೈನ ಜುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಜುವೆಲರಿ ಅಂಗಡಿ ಮಾಲೀಕರಿಂದ 258 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.