ಬೆಂಗಳೂರು : ಜೆಸಿಬಿ ವಾಹನಕ್ಕೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸಾವು!

| Published : Oct 20 2024, 02:01 AM IST / Updated: Oct 20 2024, 04:35 AM IST

ಸಾರಾಂಶ

ಜೆಸಿಬಿ ವಾಹನಕ್ಕೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಜೆಸಿಬಿ ವಾಹನಕ್ಕೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭದ್ರಪ್ಪಲೇಔಟ್‌ ನಿವಾಸಿ ಅಜಯ್‌ ಮುರುಳಿ(30) ಮೃತ ಸವಾರ. ಶುಕ್ರವಾರ ರಾತ್ರಿ ಸುಮಾರು 11ಕ್ಕೆ ಎಸ್ಟೀಮ್‌ ಮಾಲ್‌ ಕಡೆಯಿಂದ ನಾಗವಾರ ಕಡೆಗೆ ತೆರಳುವಾಗ ಹೆಬ್ಬಾಳ ಮೇಲ್ಸೇತುವೆ ಅಪ್ಪರ್‌ ರ್ಯಾಂಪ್‌ ಬಳಿ ಈ ಘಟನೆ ನಡೆದಿದೆ. ಘಟನೆ ಬಳಿಕ ಜೆಸಿಬಿ ವಾಹನದ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಹೊಸೂರು ಮೂಲದ ಅಜಯ್‌ ಮುರುಳಿ ನಗರದ ಲಾಜಿಸ್ಟಿಕ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಹೊಸೂರಿನತ್ತ ತೆರಳುತ್ತಿದ್ದ. ಎಸ್ಟೀಮ್‌ ಮಾಲ್‌ ಕಡೆಯಿಂದ ನಾಗವಾರ ಕಡೆಗೆ ತೆರಳುವಾಗ ಹೆಬ್ಬಾಳ ಮೇಲ್ಸೇತುವೆ ಅಪ್ಪರ್‌ ರ್ಯಾಂಪ್‌ ಬಳಿ ಮುಂದೆ ಹೋಗುತ್ತಿದ್ದ ಜೆಸಿಬಿ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮುಖ ಮತ್ತು ಎದೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಗಾಯಗೊಂಡಿದ್ದಾನೆ.

ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು ಗಾಯಾಳು ಅಜಯ್‌ ಮುರುಳಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಅಜಯ್‌ ಮುರುಳಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಘಟನೆ ಬಳಿಕ ಜೆಸಿಬಿ ವಾಹನದ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು, ಜೆಸಿಬಿ ವಾಹನ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.