ಸಾರಾಂಶ
ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಬೆಂಕಿ ನಂದಿಸಲು ಹೋಗಿದ್ದ ವ್ಯಕ್ತಿ ಅಗ್ನಿ ಕೆನ್ನಾಲಿಗೆಗೆ ಸಿಲುಕಿ ದುರ್ಮರಣ ಹೊಂದಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಘಟಿಸಿದೆ
ಕೆ.ಆರ್.ಪೇಟೆ : ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಬೆಂಕಿ ನಂದಿಸಲು ಹೋಗಿದ್ದ ವ್ಯಕ್ತಿ ಅಗ್ನಿ ಕೆನ್ನಾಲಿಗೆಗೆ ಸಿಲುಕಿ ದುರ್ಮರಣ ಹೊಂದಿದ ಘಟನೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಘಟಿಸಿದೆ.
ದಲಿತ ಸಮುದಾಯಕ್ಕೆ ಸೇರಿದ ಸಿದ್ದಯ್ಯನ ಜಯಕುಮಾರ್ (42) ಆಕಸ್ಮಿಕ ಬೆಂಕಿ ಅವಘಡಕ್ಕೆ ಬಲಿಯಾದ ದುರ್ಧೈವಿ.
ಗ್ರಾಮದ ಜಯಕುಮಾರ್ ಅವರಿಗೆ ಸೇರಿದ ಜಾಗದಲ್ಲಿ ಅದೇ ಗ್ರಾಮದ ನಿಂಗೇಗೌಡರ ಪುತ್ರ ಅನಿಲ್ ಕುಮಾರ್ಹುಲ್ಲಿನ ಮೆದೆ ಹಾಕಿಕೊಂಡಿದ್ದು ತಮ್ಮ ಜಾಗದಲ್ಲಿ ಹಾಕಿಕೊಂಡಿರುವ ಹುಲ್ಲಿನ ಮೆದೆಯನ್ನು ತೆರವುಗೊಳಿಸುವಂತೆ ಜಯಕುಮಾರ್ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಹುಲ್ಲಿನ ಮೆದೆ ತೆರವುಗೊಳಿಸುವ ಸಂಬಂಧ ಜಯಕುಮಾರ್ ಗ್ರಾಮಾಂತರ ಪೊಲೀಸರಿಗೂ ದೂರು ನೀಡಿದ್ದರು. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಅನಿಲ್ ಕುಮಾರ್ ಅವರು ಹಾಕಿದ್ದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಲುಗಿದೆ. ಹೊತ್ತಿ ಉರಿಯುತ್ತಿದ್ದ ಹುಲ್ಲಿನ ಮೆದೆಯ ಬೆಂಕಿಯನ್ನು ನಂದಿಸಲು ಹೋಗಿ ಜಯಕುಮಾರ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಪಟ್ಟಣದ ಅಗ್ನಿ ಶಾಮಕ ಪಡೆ ಬೆಂಕಿ ನಂದಿಸುವ ಪ್ರಯತ್ನ ಮಾಡಿದೆ. ಅಷ್ಟರಲ್ಲಾಗಲೇ ಅಗ್ನಿ ದುರಂತಕ್ಕೆ ಜಯಕುಮಾರ್ ಬಲಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.