ಸಾರಾಂಶ
ಬೆಂಗಳೂರು : ಸರ್ಕಾರಿ ಭೂಮಿಯಲ್ಲಿ ಶಾಲಾ ನಿರ್ಮಾಣಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಕೋಣಕುಂಟೆ ಪೊಲೀಸರ ಹಲ್ಲೆಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ಆರೋಪಿಸಿ ಮೃತನ ಕುಟುಂಬದವರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ಅವರು, ಈ ಪ್ರಕರಣದ ಕುರಿತು ಜಯನಗರ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಾರೆ.
ಸರ್ಕಾರಿ ಕಾಮಗಾರಿಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಜಾಮೀನು ಪಡೆದು ಬಂಧಮುಕ್ತರಾಗಿದ್ದ ಕೊತ್ತನೂರಿನ ನಿವಾಸಿ ರಾಮಸ್ವಾಮಿ ಮೃತಪಟ್ಟಿದ್ದಾರೆ. ತಮ್ಮ ಪತಿ ಸಾವಿಗೆ ಕೋಣನಕುಂಟೆ ಪೊಲೀಸರು ಕಾರಣವಾಗಿದ್ದಾರೆ ಎಂದು ಮೃತರ ಪತ್ನಿ ಮುನಿಯಮ್ಮ ದೂರಿದ್ದಾರೆ.
ಜು.17ರಂದು ಸರ್ಕಾರಿ ಜಮೀನಿನಲ್ಲಿ ಶಾಲೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ನಿರ್ಮಿತಿ ಕೇಂದ್ರದ ಎಂಜಿನಿಯರ್‌ವೊಬ್ಬರ ದೂರು ಆಧರಿಸಿ ಕೋಣಕುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅದರನ್ವಯ ರಾಮಸ್ವಾಮಿ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಸಕ್ಕರೆ ಹಾಗೂ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಜಾಮೀನು ಮಂಜೂರಾಗಿ ಅವರು ಬಿಡುಗಡೆಯಾಗಿದ್ದರು ಎಂದು ಡಿಸಿಪಿ ಲೋಕೇಶ್ ಹೇಳಿದ್ದಾರೆ.
ಇದಾದ ಎರಡು ದಿನಗಳ ಬಳಿಕ ರಾಮಸ್ವಾಮಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಅಲ್ಲದೆ ಈಗ ಕೋಣಕುಂಟೆ ಪೊಲೀಸರ ಮೇಲೆ ಹಲ್ಲೆ ಆರೋಪ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಜಯನಗರ ಎಸಿಪಿ ಅವರಿಗೆ ಸೂಚಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಕೊತ್ತನೂರಿನಲ್ಲಿ ಜಮೀನು ವಿಚಾರವಾಗಿ ರಾಮಸ್ವಾಮಿ ಕುಟುಂಬ ಹಾಗೂ ಜಿಲ್ಲಾಡಳಿತ ಮಧ್ಯೆ ವಿವಾದ ಉಂಟಾಗಿದ್ದು, ಈ ಬಗ್ಗೆ ಹಲವು ದಿನಗಳಿಂದ ಗಲಾಟೆಗಳು ನಡೆದಿದ್ದವು ಎನ್ನಲಾಗಿದೆ.