ಸಾರಾಂಶ
ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ನಾಲ್ವರು ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ಸೋಮವಾರ ನಡೆದಿದೆ.
ಮಂಡ್ಯ : ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ಸೋಮವಾರ ನಡೆದಿದೆ.
ಮಂಡ್ಯದ ಹಾಲಹಳ್ಳಿ ಮುಸ್ಲಿಂ ಬ್ಲಾಕ್ ನಿವಾಸಿಗಳಾದ ಕಾರು ಮಾಲೀಕ ಫಯಾಜ್ ಬ್ಯಾಟರಿ, ಅಸ್ಲಂಪಾಷ, ಫೀರ್‌ಖಾನ್ ಮೃತಪಟ್ಟವರು. ನೀರಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನಯಾಜ್ ಎಂಬಾತನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಯನಿಮಿತ್ತ ಪಾಂಡವಪುರಕ್ಕೆ ತೆರಳಿದ್ದ ನಾಲ್ವರು ಕಾರಿನಲ್ಲಿ ಮಂಡ್ಯ ಕಡೆಗೆ ವಾಪಸಾಗುವಾಗ ಮಾಚಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿದೆ. ನಾಲೆ ಪಕ್ಕ ತಡೆಗೋಡೆ ಇಲ್ಲದಿದ್ದರಿಂದ ಕಾರು ನಾಲೆಯೊಳಗೆ ಉರುಳಿದೆ. ಅದೇ ಸಮಯಕ್ಕೆ ಸ್ಥಳೀಯರು ಕಾರು ನಾಲೆಯೊಳಗೆ ಬಿದ್ದಿದ್ದನ್ನು ನೋಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಆ ಸಮಯದಲ್ಲಿ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದ ನಯಾಜ್‌ನನ್ನು ನೀರಿನಿಂದ ಹೊರತಂದು ಪ್ರಾಣ ರಕ್ಷಿಸಿದ್ದಾರೆ. ನಂತರದಲ್ಲಿ ಕಾರು ನೀರಿನೊಳಗೆ ಮುಳುಗಿದ್ದರಿಂದ ಉಳಿದವರನ್ನು ಬದುಕಿಸಲು ಅವರಿಂದ ಸಾಧ್ಯವಾಗಲಿಲ್ಲ.
ನೀರಿನ ಪ್ರಮಾಣ ಹೆಚ್ಚಿತ್ತು:
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದರು. ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಕಾರ್ಯಾಚರಣೆ ನಡೆಸುವುದಕ್ಕೆ ಸಾಧ್ಯವಾಗಲಿಲ್ಲ. ಕಾರಿನೊಳಗಿದ್ದವರು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಯಿತು.
ಆ ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸ್ಥಳ ಪರಿಶೀಲನೆ ನಡೆಸಿ ಪೊಲೀಸರು ಮತ್ತು ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ಸೂಚಿಸಿದರು. ಕೆಲ ಸಮಯದ ಬಳಿಕ ನೀರಿನ ಹರಿವು ಕಡಿಮೆಯಾದ್ದರಿಂದ ಕಾರ್ಯಾಚರಣೆ ಮತ್ತೆ ಶುರುವಾಯಿತು.
ಕ್ರೇನ್ ಮೂಲಕ ಕಾರ್ಯಾಚರಣೆ:
ನಾಲೆಗೆ ಕಾರು ಉರುಳಿ ಬಿದ್ದ ಸ್ಥಳಕ್ಕೆ ಕ್ರೇನ್ ತಂದು ಅದರ ಮೂಲಕ ಕಾರನ್ನು ಮೇಲೆತ್ತುವ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆಗೆ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದರು. ನಾಲೆಗೆ ಧುಮುಕಿದ ನುರಿತ ಈಜುಗಾರರು ಕಾರಿಗಾಗಿ ತೀವ್ರ ಶೋಧ ನಡೆಸಿದರು. ಅದೇ ವೇಳೆ ಕಾರ್ಯಚರಣೆಗೆ ಮೊದಲೇ ತರಲಾಗಿದ್ದ ಬೋಟ್ ಪಂಕ್ಚರ್ ಆಗಿದ್ದರಿಂದ ಮತ್ತೊಂದು ಬೋಟ್ ತರಿಸಿಕೊಂಡು ಕಾರು ಮತ್ತು ಉಳಿದವರ ಶವಗಳಿಗಾಗಿ ಶೋಧ ನಡೆಸಿದರು.
15 ಅಡಿ ಆಳದಲ್ಲಿದ್ದ ಕಾರು:
ಹಗ್ಗದ ಸಹಾಯದಿಂದ ಈಜುಗಾರರು ನಾಲೆಯೊಳಗಿದ್ದ ಕಾರನ್ನು ಗುರುತಿಸಿದರು. ಸುಮಾರು ೧೫ ಅಡಿಗಳಷ್ಟು ಒಳಗೆ ಇದ್ದ ಕಾರನ್ನು ಕ್ರೇನ್ ನೆರವಿನೊಂದಿಗೆ ಮೇಲೆತ್ತಲಾಯಿತು. ಈ ಸಮಯದಲ್ಲಿ ಕಾರಿನ ಹಿಂಬದಿಯ ಸೀಟ್‌ನಲ್ಲಿ ಅಸ್ಲಂಪಾಷಾ ಮೃತದೇಹ ಪತ್ತೆಯಾಯಿತು. ನೀರಿನಲ್ಲಿ ಕೊಚ್ಚಿಹೋಗಿದ್ದ ಉಳಿದಿಬ್ಬರ ಶವಗಳು ಸಂಜೆ ವೇಳೆಗೆ ಪತ್ತೆಯಾಗಿ ಹೊರತೆಗೆಯಲಾಯಿತು. ಜೀವಂತವಾಗಿ ಸಿಕ್ಕ ನಯಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ. ಪಡೆಯುತ್ತಿದ್ದಾನೆ.
ಮಂಡ್ಯ ತಾಲೂಕು ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲೆ ಪಕ್ಕ ತಡೆಗೋಡೆ ನಿರ್ಮಿಸುತ್ತಿಲ್ಲವೇಕೆ?: ಡೀಸಿಗೆ ಸ್ಥಳೀಯರ ಪ್ರಶ್ನೆ
ಮಂಡ್ಯ : ಹೀಗೆ ಮಾಡಿದರೆ ಹೇಗೆ ಸರ್. ನಾಲೆಗೆ ಕಾರು ಉರುಳಿ ಜನರು ಸಾಯುತ್ತಿದ್ದರೂ ನಾಲೆ ಪಕ್ಕ ತಡೆಗೋಡೆ ನಿರ್ಮಾಣ ಮಾಡುತ್ತಿಲ್ಲವೇಕೆ. ನಿಮ್ಮ ಮಕ್ಕಳು ಇಲ್ಲಿ ಓಡಾಡುವಂತಿದ್ದರೆ ಹೀಗೆ ಮಾಡುತ್ತಿದ್ದಿರಾ. ಪ್ರತಿ ವರ್ಷ ನಾಲೆಗೆ ವಾಹನಗಳು ಉರುಳಿ ಸಾಯುವವರ ಸಂಖ್ಯೆ ಹೆಚ್ಚುತ್ತಿದ್ದರೂ ತಡೆಗೋಡೆ ನಿರ್ಮಿಸಲು ನಿರ್ಲಕ್ಷ್ಯವೇಕೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಸ್ಥಳೀಯರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಕುಮಾರ ಅವರು, ಈ ಘಟನೆ ನಡೆದಿರುವುದು ದುರ್ದೈವ. ಕಾರು ಯಾವ ರೀತಿ ಅಪಘಾತ ಆಗಿದೆ ಎಂದು ಗೊತ್ತಿಲ್ಲ. ಅದರ ಬಗ್ಗೆ ತನಿಖೆ ಮಾಡುತ್ತೇವೆ. ವಿಶ್ವೇಶ್ವರಯ್ಯ ನಾಲೆ ೫೬೦ ಕಿ.ಮೀ. ಉದ್ದವಿದೆ. ಎಲ್ಲಿ ಅಪಘಾತ ಸಂಭವಿಸುತ್ತಿವೆ ಮತ್ತು ಯಾವ ಜಾಗ ಅಪಾಯಕಾರಿ ಎನ್ನುವುದನ್ನು ತಿಳಿಯಲು ತಂಡ ನಿಯೋಜನೆ ಮಾಡಿದ್ದೆವು. ಆ ತಂಡ ವರದಿಯನ್ನೂ ಸಹ ಕೊಟ್ಟಿದೆ. ಅದನ್ನು ಜಾರಿ ಮಾಡುವ ಕೆಲಸ ಸಹ ನಡೆಯುತ್ತಿದೆ ಎಂದು ಹೇಳಿದರು.
ಏಕ ಕಾಲದಲ್ಲಿ ೫೬೦ ಕಿ.ಮೀ. ದೂರ ತಡೆಗೋಡೆ ನಿರ್ಮಾಣ ಮಾಡುವುದು ಕಷ್ಟದ ಕೆಲಸ ಹಂತ ಹಂತವಾಗಿ ತಡೆಗೋಡೆ ನಿರ್ಮಾಣ ಕೆಲಸ ಕಾರ್ಯ ಆಗುತ್ತಿದೆ. ಕಾಮಗಾರಿಯನ್ನು ತೀವ್ರಗತಿಯಲ್ಲಿ ಮಾಡುವಂತೆ ನಾನು ಇನ್ನಷ್ಟು ಕ್ರಮ ವಹಿಸುತ್ತೇನೆ.
ಈ ರಸ್ತೆ ತುಂಬಾ ಕಿರಿದಾಗಿದೆ. ವಾಹನಗಳು ಓಡಾಡುವುದಕ್ಕೆ ಅಡಚಣೆಯಾಗುತ್ತಿದೆ. ಈ ರಸ್ತೆಯನ್ನು ಅಗಲೀಕರಣ ಮಾಡುವುದಕ್ಕೂ ಕ್ರಮ ವಹಿಸುವ ಭರವಸೆ ನೀಡಿದರು.