ಮಂಡ್ಯ ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ : ಫೇಸ್ಬುಕ್ ಲೈವ್ ಮಾಡಿ ಯುವಕನ ಮೇಲೆ ಹಲ್ಲೆ

| N/A | Published : Feb 25 2025, 12:46 AM IST / Updated: Feb 25 2025, 04:11 AM IST

ಸಾರಾಂಶ

ಮಂಡ್ಯ ನಗರದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಯುವಕನೊಬ್ಬನನ್ನು ಸ್ಮಶಾನಕ್ಕೆ ಕರೆತಂದು ಲಾಂಗು-ಮಚ್ಚು ಝಳಪಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಇಷ್ಟಲ್ಲದೆ ಕೃತ್ಯದ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

  ಮಂಡ್ಯ : ನಗರದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಯುವಕನೊಬ್ಬನನ್ನು ಸ್ಮಶಾನಕ್ಕೆ ಕರೆತಂದು ಲಾಂಗು-ಮಚ್ಚು ಝಳಪಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಇಷ್ಟಲ್ಲದೆ ಕೃತ್ಯದ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕೈದು ಯುವಕರು ಯುವಕನೊಬ್ಬನನ್ನು ಸ್ಮಶಾನಕ್ಕೆ ಎಳೆದುತಂದಿದ್ದಾರೆ. ಆತನನ್ನು ಸುತ್ತುವರೆದಿರುವ ಪುಡಿ ರೌಡಿಗಳು ಆತನ ಸುತ್ತ ಸುತ್ತುತ್ತಾ ಮನಬಂದಂತೆ ನಿಂದಿಸಿದ್ದು, ಯುವಕ ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚಿದರೂ ಬಿಡದೆ ಆತನಿಗೆ ಥಳಿಸಿದ್ದಾರೆ. ಪೊಲೀಸರು, ಕಾನೂನಿನ ಭಯವೇ ಇಲ್ಲದಂತೆ ವರ್ತಿಸಿರುವುದು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪುಡಿ ರೌಡಿಗಳು ನಡೆಸಿದ ಕೃತ್ಯದಿಂದ ಹೆದರಿದ ಯುವಕ ಇನ್ನೆಂದಿಗೂ ಮಂಡ್ಯಕ್ಕೆ ಬರುವುದಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಾನೆ. ಆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕನ ಮೇಲೆ ದರ್ಪ ಪ್ರದರ್ಶಿಸಿರುವುದು ಕಂಡುಬಂದಿದೆ.

ದೂರು ಕೊಟ್ಟಿಲ್ಲ: ಎಸ್‌ಪಿ

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋವನ್ನು ನಾನೂ ಸಹ ನೋಡಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಆದರೂ, ಪುಡಿರೌಡಿಗಳ ಅಟ್ಟಹಾಸವನ್ನು ನಿಯಂತ್ರಿಸಲು ಕ್ರಮವಹಿಸುವುದಾಗಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.