ಸಾರಾಂಶ
‘ನಮ್ಮ ಅಪ್ಪನಿಗೂ ಇಬ್ಬರು ಹೆಂಡ್ತಿರು, ತಾತನಿಗೂ ಇಬ್ಬರೂ ಹೆಂಡ್ತಿರು. ನನಗೂ ಎರಡು ಹೆಂಡ್ತಿಯರು ಇರಲಿ ಅಂತ ದೇವರೇ ನಮ್ಮನ್ನು ಜೋಡಿ ಮಾಡಿದ್ದಾನೆ ಎಂದು ಹೇಳಿಯೇ ಮಡೆನೂರು ಮನು ನನಗೆ ಮಾಸ ಮಾಡಿದ್ದಾನೆ’ ಎಂದು ಸಂತ್ರಸ್ತ ನಟಿ ಗಂಭೀರ ಆರೋಪ
ಬೆಂಗಳೂರು : ‘ನಮ್ಮ ಅಪ್ಪನಿಗೂ ಇಬ್ಬರು ಹೆಂಡ್ತಿರು, ತಾತನಿಗೂ ಇಬ್ಬರೂ ಹೆಂಡ್ತಿರು. ನನಗೂ ಎರಡು ಹೆಂಡ್ತಿಯರು ಇರಲಿ ಅಂತ ದೇವರೇ ನಮ್ಮನ್ನು ಜೋಡಿ ಮಾಡಿದ್ದಾನೆ. ಪ್ರಪಂಚದಲ್ಲಿ ಎರಡ್ಮೂರು ಮದುವೆ ಮಾಡಿಕೊಂಡವರು ಇಲ್ವಾ ಎಂದು ಹೇಳಿಯೇ ಮಡೆನೂರು ಮನು ನನಗೆ ಮಾಸ ಮಾಡಿದ್ದಾನೆ’ ಎಂದು ಸಂತ್ರಸ್ತ ನಟಿ ಗಂಭೀರ ಆರೋಪ ಮಾಡಿದ್ದಾರೆ.
ಅತ್ಯಾಚಾರ ಆರೋಪದಲ್ಲಿ ನಟ ಮಡೆನೂರು ಮನು ಬಂಧನದ ಬಳಿಕ ಶುಕ್ರವಾರ ಮಾಧ್ಯಮಗಳ ಜತೆಗೆ ಮಾತನಾಡಿರುವ ನಟಿ, ‘ಮನು ನನ್ನನ್ನು ಮದುವೆ ಆಗುತ್ತೇನೆ ಅಂತ ಮಾತು ಕೊಟ್ಟಿದ್ದಕ್ಕೆ ನಾನು ಪದೇ ಪದೆ ಮೋಸ ಹೋದೆ. ಮೊದಲ ಬಾರಿಗೆ ನನ್ನ ಮೇಲೆ ಅತ್ಯಾಚಾರ ನಡೆದಾಗ ಫುಲ್ ಶಾಕ್‌ನಲ್ಲಿದ್ದೆ. ಏನು ಮಾಡಬೇಕು ಎಂದು ತೋಚಲಿಲ್ಲ. ಅದೇ ದಿನ ನನಗೆ ಮನು ನಾಲ್ಕು ಗೋಡೆ ಮಧ್ಯೆ ತಾಳಿ ಕಟ್ಟಿದ್ದ. ಎರಡು ವರ್ಷಗಳ ನಂತರ ಎಲ್ಲರ ಮುಂದೆ ಮದುವೆಯಾಗುವುದಾಗಿ ಭರವಸೆ ಕೊಟ್ಟ. ನಾನು ಅವನನ್ನು ನಂಬಿಕೊಂಡು ಬಂದೆ’ ಎಂದು ಹೇಳಿದ್ದಾರೆ.
ನನ್ನ ಗಂಡ ಯಾವ ತಪ್ಪೂ ಮಾಡಿಲ್ಲ-ದಿವ್ಯಾ:
‘ನನ್ನ ಗಂಡ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಯಾರಿಗೂ ಮೋಸ ಮಾಡಿಲ್ಲ. ಮೂರು ವರ್ಷ ಕಷ್ಟಪಟ್ಟು ಒಂದು ಸಿನಿಮಾ ಮಾಡಿದ್ದಾರೆ. ಈಗ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಾಗ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಮಡೆನೂರು ಮನು ಪತ್ನಿ ದಿವ್ಯಾ ಹೇಳಿದ್ದಾರೆ.
‘ಮಡೆನೂರು ಮನು ನನಗೆ ಕೊಟ್ಟಿರುವ ದೈಹಿಕ ಹಿಂಸೆಯನ್ನು ಸಹಿಸಿಕೊಂಡೇ ಬಂದಿದ್ದೇನೆ. ನನಗೆ ಬೇರೆಯವರೊಂದಿಗೆ ಜೀವನವಿತ್ತು. ಅದು ಮನುಗೂ ಗೊತ್ತಿತ್ತು. ಅದನ್ನೂ ಈಗ ಹಾಳು ಮಾಡಿದ್ದಾನೆ. 2022ರಲ್ಲಿ ಆಗಿರುವ ಘಟನೆ ಇಟ್ಟುಕೊಂಡು ಈಗ ದೂರು ನೀಡಿದ್ದು ಯಾಕೆ? ಎಂದು ಜನ ಕೇಳುತ್ತಿದ್ದಾರೆ. ಅವನು ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಕ್ಕೆ ತಡವಾಗಿ ದೂರು ನೀಡುವ ನಿರ್ಧಾರಕ್ಕೆ ಬರಲು ಕಾರಣವಾಯಿತು. ನನ್ನ ಹಿಂದೆ ಯಾರೂ ಇಲ್ಲ. ನನಗೆ ಆಗಿರೋ ಅನ್ಯಾಯಕ್ಕೆ ನಾನು ಒಬ್ಬಳೇ ಮುಂದೆ ಬಂದು ದೂರು ಕೊಟ್ಟಿದ್ದೇನೆ. ನನಗೆ ನ್ಯಾಯ ಬೇಕು’ ಎಂದು ಸಂತ್ರಸ್ತೆ ಹೇಳಿದ್ದಾರೆ.
ಗಂಡನ ಮೇಲೆ ನಟಿ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ದಿವ್ಯಾ, ‘ನನ್ನ ಗಂಡನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಎಲ್ಲಾ ಆರೋಪಗಳು ಸುಳ್ಳು. ಕಾನೂನು ಮೂಲಕವೇ ನಾನು ಹೋರಾಟ ಮಾಡುತ್ತೇನೆ. ನನ್ನ ಗಂಡ ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡುತ್ತೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.