ಸಾರಾಂಶ
‘ಮಿಲಿಟರಿ ಕ್ರಮ, ಉದ್ವಿಗ್ನತೆ ಹೆಚ್ಚಳದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಮಾತುಕತೆ ನಡೆಸಿ ’ ಎಂದು ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತು ಎಐಎಂಪಿಎಲ್‌ಬಿ ಹೇಳಿದೆ.
ಶ್ರೀನಗರ: ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆ ಬೆನ್ನಲ್ಲೇ ಜಮ್ಮು ಕಾಶ್ಮೀರ ನಾಯಕರು ಶಾಂತಿ ಮಾತುಕತೆ ಮಾತನಾಡಿದ್ದಾರೆ. ‘ಮಿಲಿಟರಿ ಕ್ರಮ, ಉದ್ವಿಗ್ನತೆ ಹೆಚ್ಚಳದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಮಾತುಕತೆ ನಡೆಸಿ ’ ಎಂದು ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತು ಎಐಎಂಪಿಎಲ್‌ಬಿ ಹೇಳಿದೆ.
ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ ಪಾಕಿಸ್ತಾನದ ದಾಳಿಯಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ, ಅವರು ಬಂದೂಕುಗಳನ್ನು ಮೌನಗೊಳಿಸಬೇಕು. ಪರಿಸ್ಥಿತಿ ಸಾಮಾನ್ಯಗೊಳಿಸಲು ಸಹಾಯ ಮಾಡಬೇಕು’ ಎಂದರು. ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದು,‘ ಮಿಲಿಟರಿ ಕಾರ್ಯಾಚರಣೆ ನಡೆದಾಗಲೆಲ್ಲಾ ನಾವು ನೋಡಿದ್ದೇವೆ.
ಇದು ಯಾವುದೇ ಪರಿಹಾರವನ್ನು ತರುವುದಿಲ್ಲ. ಶಾಂತಿಯನ್ನು ಸ್ಥಾಪಿಸಲು ನೆರವಾಗುವುದಿಲ್ಲ. ಪಾಕಿಸ್ತಾನದ ಪರಿಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ಎರಡೂ ದೇಶಗಳು ರಾಜಕೀಯ ಹಸ್ತಕ್ಷೇಪಕ್ಕೆ ಪ್ರಯತ್ನಿಸಬೇಕು. ಮಿಲಿಟರಿ ಹಸ್ತಕ್ಷೇಪದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ( ಎಐಎಂಪಿಎಲ್‌ಬಿ) ಕೂಡ ಈ ಬಗ್ಗೆ ಆಗ್ರಹಿಸಿದ್ದು‘ ಉಭಯ ದೇಶಗಳು ದ್ವಿಪಕ್ಷೀಯ ಸಂವಾದ, ಮತ್ತು ಚರ್ಚೆಗಳ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ಯುದ್ಧವೂ ಯಾವುದೇ ಸಮಸ್ಯೆಗೆ ಪರಿಹಾರವಲ್ಲ’ ಎಂದಿದ್ದಾರೆ.
ಪಂಜಾಬ್, ಹರ್ಯಾಣದಲ್ಲಿ ಸರ್ಕಾರಿ ಅಧಿಕಾರಿಗಳ ರಜೆ ರದ್ದು
ಚಂಡೀಗಢ: ಭಾರತ-ಪಾಕ್ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳು ರಾಜ್ಯಾದ್ಯಂತ ಸರ್ಕಾರಿ ನೌಕರರ ಮತ್ತು ಅಧಿಕಾರಿಗಳ ರಜೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿವೆ.ಪಂಜಾಬ್ ಸರ್ಕಾರವು ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಪಂಜಾಬ್ ನಾಗರಿಕ ಸೇವೆಗಳ (ಪಿಸಿಎಸ್) ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದೆ. ರಾಜ್ಯ ಸರ್ಕಾರದ ಮಂಡಳಿಗಳು, ನಿಗಮಗಳು ಮತ್ತು ವಿವಿಗಳ ಎಲ್ಲಾ ನೌಕರರು ರಜೆ ಪಡೆಯದಂತೆ ಹರಿಯಾಣ ಸರ್ಕಾರ ನಿರ್ದೇಶಿಸಿದೆ.‘ಭಾರತ-ಪಾಕ್ ಸಂಘರ್ಷದ ಹಿನ್ನೆಲೆ, ರಜೆಯನ್ನು ರದ್ದುಪಡಿಸಲಾಗಿದೆ. ಯಾವುದೇ ಅಧಿಕಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅನುಮೋದನೆಯಿಲ್ಲದೆ ರಜೆ ಪಡೆಯುವಂತಿಲ್ಲ. ಇಲ್ಲಿಯವರೆಗೆ ಅನುಮೋದಿಸಲಾದ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ’ ಎಂದು ಆಡಳಿತ ತಿಳಿಸಿದೆ.
ಪಾಕ್ ಹಣಕಾಸು ಇಲಾಖೆ ಎಕ್ಸ್ ಖಾತೆ ಹ್ಯಾಕ್
ಇಸ್ಲಾಮಾಬಾದ್/ನವದೆಹಲಿ: ಭಾರತದ ಜತೆಗಿನ ಉದ್ವಿಗ್ನತೆ ಸಮಯದಲ್ಲೇ ಪಾಕಿಸ್ತಾನದ ಹಣಕಾಸು ಸಚಿವಾಲಯದ ಎಕ್ಸ್ ಖಾತೆ ಹ್ಯಾಕ್ ಮಾಡಲಾಗಿದೆ ಹಾಗೂ ಅಸಂಬದ್ಧ ಸಂದೇಶ ಹಾಕಲಾಗಿದೆ.ಇದರ ಬೆನ್ನಲ್ಲೇ, ‘ಇದೊಂದು ಸುಳ್ಳು ಪೋಸ್ಟ್. ನಮ್ಮ ವಿತ್ತ ಇಲಾಖೆ ಖಾತೆ ಹ್ಯಾಕ್ ಆಗಿದೆ’ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೊಂಡಿದೆ.
‘ಶತ್ರುಗಳಿಂದ ದೇಶಕ್ಕೆ ಭಾರೀ ಹಾನಿಯಾಗಿದ್ದು, ಹೆಚ್ಚಿನ ಸಾಲದ ನೆರವಿಗಾಗಿ ಪಾಕಿಸ್ತಾನವು ಸರ್ಕಾರ ಅಂತಾರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡುತ್ತದೆ. ಯುದ್ಧಾತಂಕ ಮತ್ತು ಷೇರುಪೇಟೆ ಕುಸಿತದ ಹಿನ್ನೆಲೆಯಲ್ಲಿ ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂಘರ್ಷ ತಿಳಿಗೊಳಿಸಲು ಮನವಿ ಮಾಡುತ್ತೇವೆ’ ಎಂದು ಪೋಸ್ಟ್ ಹಾಕಲಾಗಿತ್ತು.
‘ಆಪರೇಷನ್ ಸಿಂದೂರ್’ ಟೈಟಲ್‌ಗೆ 30ಕ್ಕೂ ಅಧಿಕ ಅರ್ಜಿ ಸಲ್ಲಿಕೆ
ಮುಂಬೈ: ‘ಆಪರೇಷನ್ ಸಿಂದೂರ್’ನಿಂದ ಪ್ರೇರಿತ ಶೀರ್ಷಿಕೆಗಳ ನೋಂದಣಿಗೆ ಚಿತ್ರನಿರ್ಮಾಪಕರು ಮತ್ತು ನಟರು ಮುಗಿಬಿದ್ದಿದ್ದಾರೆ. ಕೇವಲ 2 ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಐಎಂಪಿಪಿಎ), ಇಂಡಿಯನ್ ಫಿಲ್ಮ್ ಆಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಕೌನ್ಸಿಲ್ (ಐಎಫ್‌ಟಿಪಿಸಿ) ಮತ್ತು ವೆಸ್ಟರ್ನ್ ಇಂಡಿಯಾ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಡಬ್ಲುಐಎಫ್‌ಪಿಎ)ಗೆ ಅರ್ಜಿಗಳು ಹರಿದುಬಂದಿವೆ.‘ಈ 3 ಸಂಸ್ಥೆಗಳಿಗೆ 30ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಈ ಸಂಖ್ಯೆ 50-60ಕ್ಕೆ ಏರಬಹುದು. ಬಹುತೇಕರು ‘ಆಪರೇಷನ್ ಸಿಂದೂರ್’ ಮತ್ತು ‘ಮಿಷನ್ ಸಿಂದೂರ್’ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ‘ಹಿಂದೂಸ್ತಾನ್ ಕಾ ಸಿಂದೂರ್’, ‘ಮಿಷನ್ ಆಪರೇಷನ್ ಸಿಂದೂರ್’, ‘ಸಿಂದೂರ್ ಕಾ ಬದ್ಲಾ’, ‘ಪಹಲ್ಗಾಂ: ದಿ ಟೆರರ್ ಅಟ್ಯಾಕ್’, ‘ಪಹಲ್ಗಾಂ ಅಟ್ಯಾಕ್’ ಶೀರ್ಷಿಕೆಗಳಿಗೂ ಅರ್ಜಿಗಳು ಸಲ್ಲಿಕೆಯಾಗಿವೆ. ಒಬ್ಬ ವ್ಯಕ್ತಿ ಎಷ್ಟೇ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಿದರೂ, ಮೊದಲು ಅರ್ಜಿ ಸಲ್ಲಿಸಿದವರಿಗೆ ಶೀರ್ಷಿಕೆ ನೀಡಲಾಗುತ್ತದೆ’ ಎಂದು ಐಎಂಪಿಪಿಎ ಕಾರ್ಯದರ್ಶಿ ಅನಿಲ್ ನಾಗರಾಥ್ ತಿಳಿಸಿದರು.