ಸಾರಾಂಶ
- ಕೆಪಿಟಿಸಿಎಲ್‌ನ ಜ್ಯೋತಿಪ್ರಕಾಶ್, ಕಾರು ಚಾಲಕನ ಬಂಧನ
---ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯುತ್ ಮಂಜೂರಾತಿ ಸಂಬಂಧ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಲು 50 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಕರ್ತವ್ಯ ಅಧಿಕಾರಿ(ಒಎಸ್‌ಡಿ) ಸೇರಿ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಇಂಧನ ಸಚಿವರ ಒಎಸ್‌ಡಿ ಹಾಗೂ ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್ ಜ್ಯೋತಿ ಪ್ರಕಾಶ್(50) ಮತ್ತು ಅವರ ಕಾರು ಚಾಲಕ ನವೀನ್(34) ಬಂಧಿತರು. ಬ್ಯಾಡರಹಳ್ಳಿ ಕೆಂಪೇಗೌಡ ನಗರ ನಿವಾಸಿ ಕೆ.ಎಂ.ಅನಂತರಾಜು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುವ ವೇಳೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
1 ಲಕ್ಷ ರು. ಲಂಚಕ್ಕೆ ಬೇಡಿಕೆ:ಅನಂತರಾಜು ಅವರು ಡಿ.ಆರ್. ಡೆವಲಪರ್ಸ್‌ಗೆ ವಿದ್ಯುತ್ ಮಂಜೂರಾತಿ ಪಡೆಯಲು ಕೆಪಿಟಿಸಿಎಲ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಎನ್‌ಒಸಿ ನೀಡಲು ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್ ಜ್ಯೋತಿ ಪ್ರಕಾಶ್ 1 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಲಂಚ ನೀಡಲು ನಿರಾಕರಿಸಿದ ಅನಂತರಾಜು, ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಶನಿವಾರ ದೂರುದಾರ ಅನಂತರಾಜು ಅವರಿಂದ 50 ಸಾವಿರ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.