ಪಿಯು ಫಲಿತಾಂಶದ ವಿಚಾರಕ್ಕೆ ಇರಿದುಕೊಂಡ ತಾಯಿ-ಮಗಳು!

| Published : Apr 30 2024, 07:01 AM IST

murder
ಪಿಯು ಫಲಿತಾಂಶದ ವಿಚಾರಕ್ಕೆ ಇರಿದುಕೊಂಡ ತಾಯಿ-ಮಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡ ಪರಿಣಾಮ ಮಗಳು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು :  ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡ ಪರಿಣಾಮ ಮಗಳು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿಯ ಶಾಸ್ತ್ರೀನಗರದ ಸಾಹಿತಿ (17) ಮೃತ ಪುತ್ರಿ. ಈಕೆಯ ತಾಯಿ ಪದ್ಮಜಾ (60) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಸೋಮವಾರ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪದ್ಮಜಾ ದಂಪತಿ ಸ್ವಂತ ಮನೆಯಲ್ಲಿ ಪುತ್ರಿ ಸಾಹಿತಿ ಜತೆಗೆ ನೆಲೆಸಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಪದ್ಮಜಾ ಪತಿ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ತಾಯಿ-ಮಗಳು ಮಾತ್ರ ಇದ್ದರು. ಇತ್ತೀಚೆಗೆ ಪ್ರಕಟಗೊಂಡ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಸಾಹಿತಿ ಕಡಿಮೆ ಅಂಕ ಪಡೆದಿದ್ದಳು. ಹೀಗಾಗಿ ಪದ್ಮಾಜಾಗೆ ಸಮಾಧಾನ ಇರಲಿಲ್ಲ. ಇದೇ ವಿಚಾರವಾಗಿ ತಾಯಿ-ಮಗಳ ನಡುವೆ ಆಗಾಗ ಜಗಳವಾಗಿತ್ತಿತ್ತು.

ಸಂಬಂಧಿಗೆ ಕರೆ ಮಾಡಿದ ತಾಯಿ

ಸೋಮವಾರ ಸಂಜೆ ಇದೇ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ವೇಳೆ ಪದ್ಮಜಾ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಮನೆಗೆ ಬರುವಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಹಿತಿ ತೀವ್ರ ರಕ್ತಸ್ರಾವವಾಗಿ ಮನೆಯಲ್ಲೇ ಮೃತಪಟ್ಟಿದ್ದಾಳೆ. ರಕ್ತದ ಮಡುವಿನಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದ ಪದ್ಮಜಾ ಅವರನ್ನು ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಸದ್ಯ ಗಾಯಾಳು ಪದ್ಮಜಾಗೆ ಚಿಕಿತ್ಸೆ ಮುಂದುವರೆದಿದೆ. ಚೇತರಿಸಿಕೊಂಡ ಬಳಿಕ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸಾಹಿತಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.