ಸಾರಾಂಶ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ತನ್ನ ಎರಡು ವರ್ಷದ ಮಗಳನ್ನು ಭೀಕರವಾಗಿ ಕೊಂದು ಬಳಿಕ ತಾಯಿಯೊಬ್ಬಳು ಆತ್ಮಹತ್ಯೆ ಯತ್ನಿಸಿರುವ ದಾರುಣ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ತನ್ನ ಎರಡು ವರ್ಷದ ಮಗಳನ್ನು ಭೀಕರವಾಗಿ ಕೊಂದು ಬಳಿಕ ತಾಯಿಯೊಬ್ಬಳು ಆತ್ಮಹತ್ಯೆ ಯತ್ನಿಸಿರುವ ದಾರುಣ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸೀಗೇಹಳ್ಳಿ ನಿವಾಸಿ ಲಕ್ಷ್ಮೀನಾರಾಯಣ್ ದಂಪತಿ ಪುತ್ರಿ ಶೃತಿಕಾ (2) ಕೊಲೆಯಾದ ದುರ್ದೈವಿ. ಆತ್ಮಹತ್ಯೆಗೆ ಯತ್ನಿಸಿದ ಮೃತಳ ತಾಯಿ ಚಿನ್ನಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ದಿನಗಳ ಹಿಂದೆ ಸೀಗೇಹಳ್ಳಿಯ ಮನೆಯಲ್ಲಿ ಮಗಳ ಕೊಂದು ನಂತರ ಕತ್ತು ಸೀಳಿಕೊಂಡು ಆಕೆ ಆತ್ಮಹತ್ಯೆ ಯತ್ನಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಮೂಲದ ಲಕ್ಷ್ಮೀನಾರಾಯಣ್, ಮೂರು ತಿಂಗಳ ಹಿಂದಷ್ಟೇ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದರು. ಬಳಿಕ ಸಾಫ್ಟ್‌ವೇರ್ ಕಂಪನಿಯಲ್ಲಿ ನೌಕರಿ ಪಡೆದ ಆತ, ಸೀಗೇಹಳ್ಳಿಯಲ್ಲಿ ತನ್ನ ಪತ್ನಿ ಹಾಗೂ ಮಗಳ ಜತೆ ವಾಸವಾಗಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಅಲ್ಲದೆ ಅನಾರೋಗ್ಯಕ್ಕೆ ಅವರ ಪತ್ನಿ ಚಿನ್ನಾ ತುತ್ತಾಗಿದ್ದಳು. ಈ ಎರಡು ಕಾರಣಗಳಿಂದ ಖಿನ್ನತೆಗೆ ಒಳಗಾದ ಆಕೆ, ತನ್ನ ಮಗಳ ಕೊಂದು ಆತ್ಮಹತ್ಯೆ ಯೋಜಿಸಿದ್ದಳು. ಅಂತೆಯೇ ಭಾನುವಾರ ಸಂಜೆ ಪತಿ ಮನೆಯಿಂದ ಹೊರ ಹೋದಾಗ ಮಗಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಚಾಕುವಿನಿಂದ ತನ್ನ ಕುತ್ತಿಗೆ ಸೀಳಿಕೊಂಡು ಆಕೆ ಆತ್ಮಹತ್ಯೆ ಯತ್ನಿಸಿದ್ದಾಳೆ. ಆಗ ಚೀರಾಟ ಕೇಳಿ ಪಕ್ಕದ ಮನೆಯವರು ಮನೆ ಬಂದಾಗ ರಕ್ತದ ಮಡುವಿಲ್ಲಿ ಚಿನ್ನಾ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತುರ್ತು ಚಿಕಿತ್ಸಾ ಘಟಕದಲ್ಲಿ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.