ಸಾರಾಂಶ
ಶಾಸಕ ಮುನಿರತ್ನ ನಮ್ಮ ಮೊಬೈಲ್ ಟ್ಯಾಪ್ ಮಾಡಿಸಿದ್ದಾರೆ. ನಮ್ಮ ಕೊಲೆಗೆ ಯತ್ನಿಸಿದ್ದಲ್ಲದೆ ನನ್ನ-ನನ್ನ ಪತ್ನಿ ಅಶ್ಲೀಲ ವಿಡಿಯೋ ಮಾಡುವುದಾಗಿ ಹೆದರಿಸಿದ್ದ. ಹೀಗಾಗಿ ಮುನಿರತ್ನ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು : ಶಾಸಕ ಮುನಿರತ್ನ ನಮ್ಮ ಮೊಬೈಲ್ ಟ್ಯಾಪ್ ಮಾಡಿಸಿದ್ದಾರೆ. ನಮ್ಮ ಕೊಲೆಗೆ ಯತ್ನಿಸಿದ್ದಲ್ಲದೆ ನನ್ನ-ನನ್ನ ಪತ್ನಿ ಅಶ್ಲೀಲ ವಿಡಿಯೋ ಮಾಡುವುದಾಗಿ ಹೆದರಿಸಿದ್ದ. ಹೀಗಾಗಿ ಮುನಿರತ್ನ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.ಅಶ್ಲೀಲ ವಿಡಿಯೋ ಸೃಷ್ಟಿಸಿ ಲಗ್ಗೆರೆ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಪತಿ ನಾರಾಯಣಸ್ವಾಮಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸಿದ ಆರೋಪ ಮೇರೆಗೆ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣಸ್ವಾಮಿ, ಮುನಿರತ್ನ ಅವರು ವ್ಯವಸ್ಥಿತವಾಗಿ ಬಿಜೆಪಿ ನಾಯಕರನ್ನು ಟ್ರ್ಯಾಪ್ ಮಾಡಿ ವಿಡಿಯೋ ಮಾಡಿಕೊಂಡಿದ್ದಾರೆ, ಬ್ಲ್ಯಾಕ್ ಮಾಡುತ್ತಿದ್ದಾರೆ. ಕ್ಷೇತ್ರದಲ್ಲೂ ಹಲವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ನಮ್ಮ ಬೆಡ್ ರೂಮಿನಲ್ಲಿ ಕ್ಯಾಮೆರಾ ಇಡಲು ನಮ್ಮ ಮನೆ ಕೆಲಸದವರಿಗೆ ಕೋಟ್ಯಂತರ ರುಪಾಯಿ ಆಫರ್ ನೀಡಿದ್ದರು. ಇಂಥ ವಿಕೃತನ ವಿರುದ್ಧ ಬಿಜೆಪಿಯವರು ಕ್ರಮ ಕೈಗೊಳ್ಳಬೇಕು. ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮನ್ನು ಕೊಲೆ ಮಾಡಲು ಕೂಡ ಷಡ್ಯಂತ್ರ ಮಾಡಿದ್ದರು. ಇದಕ್ಕೆ ಸ್ಥಳೀಯ ಕೆಲ ಪೊಲೀಸರೂ ಸಹಕಾರ ನೀಡಿದ್ದರು. ಮುನಿರತ್ನ ಅನಾಚಾರಗಳ ಬಗ್ಗೆ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ದೂರು ನೀಡುತ್ತೇನೆ. ಜತೆಗೆ ಒಕ್ಕಲಿಗ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮಿಗಳಿಗೂ ದೂರು ಕೊಡುತ್ತೇನೆ ಎಂದು ಹೇಳಿದರು.
ಇಡ್ಲಿ ಮಾರುತ್ತಿದ್ದ ಕುಟುಂಬ ಈಗ ಹೇಗೆ ಕೋಟ್ಯಧಿಪತಿಯಾಯಿತು? ಬರೀ ಹನಿ ಟ್ರ್ಯಾಪ್ ಮಾಡಿಯೇ ಇಷ್ಟೊಂದು ಹಣ ಮಾಡಿದ್ದಾರಾ? ಬಿಜೆಪಿಯ ಸಾಕಷ್ಟು ಜನ ಶಾಸಕರ ಸೀಡಿಗಳು ಮುನಿರತ್ನ ಬಳಿ ಇವೆ. ಹೀಗಾಗಿ ಅವರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಮನವಿ ಮಾಡಿದರು.