ಸಾರಾಂಶ
ಏನಿದು ಬಳ್ಳಾರಿ ಮಾಡ್ಯೂಲ್?ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ನಿಂದ ಪ್ರೇರಿತರಾಗಿ ಬಳ್ಳಾರಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ತಂಡ. ಮಿನಾಜ್ ಅಲಿಯಾಸ್ ಮೊಹಮ್ಮದ್ ಸುಲೈಮಾನ್ ಈ ಜಾಲವನ್ನು ನಿರ್ವಹಿಸುತ್ತಿದ್ದ. ಈ ಬಗ್ಗೆ ಸುಳಿವು ದೊರೆತ ಕಾರಣ ಡಿ.14ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ. ಇದೀಗ ಮಿನಾಜ್ ಹಾಗೂ ಈತನ ಸಹಚರ ಸಯ್ಯದ್ ಸಮೀರ್‌ನನ್ನು ಬಳ್ಳಾರಿಯಲ್ಲಿ ಬಂಧಿಸಲಾಗಿದೆ. ಈ ಹಿಂದೆ ಪುಣೆಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿದ್ದ ಪುಣೆ ಮಾಡ್ಯೂಲ್ ಅನ್ನು ಎನ್‌ಐಎ ಭೇದಿಸಿತ್ತು.
--ಎಲ್ಲೆಲ್ಲಿ ಎನ್‌ಐಎ ದಾಳಿ?
ಕರ್ನಾಟಕದ ಬೆಂಗಳೂರು, ಬಳ್ಳಾರಿ, ದೆಹಲಿ, ಮುಂಬೈ ಹಾಗೂ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಎನ್‌ಐಎ ದಾಳಿ. ಈ ಪೈಕಿ ಕರ್ನಾಟಕದಲ್ಲಿ ಐವರು ಹಾಗೂ ಉಳಿದೆಡೆ ತಲಾ ಒಬ್ಬ ಶಂಕಿತ ಉಗ್ರರ ಬಂಧನ.--
ಉಗ್ರರ ಸಂಚು ಏನು?ದೇಶದಲ್ಲಿ ಜಿಹಾದ್, ಖಲೀಫತ್, ಐಸಿಸ್ ಚಿಂತನೆ ಜಾರಿಗೊಳಿಸುವುದು. ಇದಕ್ಕಾಗಿ ದೇಶದಲ್ಲಿ ಐಇಡಿ ಸ್ಫೋಟ ನಡೆಸಲು ಸಜ್ಜಾಗಿದ್ದ ಬಳ್ಳಾರಿ ಮಾಡ್ಯೂಲ್. ಇದಕ್ಕಾಗಿ ಎನ್‌ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಸಂಪರ್ಕದಲ್ಲಿದ್ದ ಬಂಧಿತರು. ಜಿಹಾದ್‌ಗಾಗಿ ಕಾಲೇಜು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಈ ತಂಡ ಬಂಧನದೊಂದಿಗೆ ದೊಡ್ಡ ದುರಂತ ತಪ್ಪಿದೆ.--ನವದೆಹಲಿ: ಸೋಮವಾರ ಬೆಳ್ಳಂಬೆಳಗ್ಗೆ ಕರ್ನಾಟಕ ಸೇರಿದಂತೆ 4 ವಿವಿಧ ರಾಜ್ಯಗಳ 19 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕರ್ನಾಟಕದ ‘ಐಸಿಸ್ ಬಳ್ಳಾರಿ ಮಾಡ್ಯೂಲ್’ ಅನ್ನು ಭೇದಿಸಿದೆ. ದಾಳಿ ವೇಳೆ ಬಳ್ಳಾರಿ ಐಸಿಸ್ ಜಾಲದ ಪ್ರಮುಖ ಮಿನಾಜ್ ಸೇರಿದಂತೆ 8 ಜನರನ್ನು ಬಂಧಿಸಿರುವ ಎನ್‌ಐಎ, ಈ ಮೂಲಕ ದೇಶವ್ಯಾಪಿ ಭಾರೀ ಸ್ಫೋಟ ನಡೆಸುವ ಸಂಚನ್ನು ವಿಫಲಗೊಳಿಸಿರುವುದಾಗಿ ಹೇಳಿದೆ.
ಬಂಧಿತ 8 ಜನರಲ್ಲಿ ಇಬ್ಬರನ್ನು ಬಳ್ಳಾರಿಯಲ್ಲಿ ಹಾಗೂ ಮೂವರನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ತಲಾ ಒಬ್ಬರನ್ನು ಜೆಮ್‌ಶೆಡ್‌ಪುರ, ದೆಹಲಿ ಹಾಗೂ ಮುಂಬೈನಲ್ಲಿ ಬಂಧಿಸಲಾಗಿದೆ. ಇವರು ಬಾಂಬ್ ಸ್ಫೋಟ ಸೇರಿ ವಿವಿಧ ದುಷ್ಕೃತ್ಯಗಳು, ಅದರಲ್ಲೂ ವಿಶೇಷವಾಗಿ ‘ಐಇಡಿ ಸ್ಫೋಟ’ದ (ಸುಧಾರಿತ ಸ್ಫೋಟಕ) ಸಂಚು ರೂಪಿಸಿದ್ದರು ಎಂದು ಎನ್ಐಎ ಹೇಳಿದೆ.ನಿಷೇಧಿತ ಐಸಿಸ್‌ನಿಂದ ಪ್ರೇರೇಪಿತರಾಗಿದ್ದ ಶಂಕಿತ ಉಗ್ರರು, ಬಳ್ಳಾರಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಭಾರೀ ಸಂಚು ರೂಪಿಸಿದ್ದಾರೆ ಎಂಬ ಸುಳಿವು ಪಡೆದಿದ್ದ ಎನ್‌ಐಎ ಈ ಸಂಬಂಧ ಡಿ.14ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಆ ಸಂಬಂಧ ತನಿಖೆ ತೀವ್ರಗೊಳಿಸಿದ್ದ ಎನ್‌ಐಎ, ಸೋಮವಾರ ಆಯಾ ರಾಜ್ಯಗಳ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕರ್ನಾಟಕದ ಬಳ್ಳಾರಿ, ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಅಮರಾವತಿ, ಜಾರ್ಖಂಡ್‌ನ ಜೆಮ್‌ಶೆಡ್‌ಪುರ, ಬೊಕಾರೋ ಮತ್ತು ದೆಹಲಿಯ ಒಟ್ಟು 19 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಶಿವಾಜಿನಗರ, ಪುಲಕೇಶಿ ನಗರ ಸೇರಿದಂತೆ ಇತರೆಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಸ್ಫೋಟಕ ವಶ:ದಾಳಿ ವೇಳೆ ಸ್ಫೋಟ ಕೃತ್ಯಕ್ಕೆ ಬಳಸುವ ಸಲ್ಫರ್, ಪೊಟಾಷಿಯಂ, ನೈಟ್ರೇಟ್, ಚಾರ್‌ಕೋಲ್, ಗನ್‌ಪೌಡರ್, ಸಕ್ಕರೆ, ಎಥೆನಾಲ್, ಹರಿತವಾದ ಆಯುಧಗಳು, ಹಣ, ರಹಸ್ಯ ಮಾಹಿತಿಯ ದಾಖಲೆಗಳು, ಸ್ಮಾರ್ಟ್‌ಫೋನ್ ಮತ್ತು ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.ಐಇಡಿ ಸ್ಫೋಟದ ಗುರಿ:
ಬಂಧಿತರು ಜಿಹಾದ್, ಖಲೀಫತ್ ಮತ್ತು ಐಸಿಸ್ ಚಿಂತನೆಗಳನ್ನು ಜಾರಿಗೊಳಿಸುವ ಸಲುವಾಗಿ ದೇಶದಲ್ಲಿ ಸ್ಫೋಟ ಅದರಲ್ಲೂ ವಿಶೇಷವಾಗಿ ಐಇಡಿ ಸ್ಫೋಟದ ದುಷ್ಕೃತಕ್ಕೆ ಸಜ್ಜಾಗಿದ್ದರು. ಪರಸ್ಪರರ ನಡುವೆ ಎನ್‌ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಸಂಪರ್ಕದಲ್ಲಿದ್ದರು. ಜಿಹಾದ್‌ಗಾಗಿ ಕಾಲೇಜು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಇವರ ಬಂಧನದೊಂದಿಗೆ ಸ್ಫೋಟದ ದೊಡ್ಡ ಅವಘಡವೊಂದು ತಪ್ಪಿದೆ ಎಂದು ಎನ್ಐಎ ಹೇಳಿದೆ.ಬಳ್ಳಾರಿ ಜಾಲ:ಸೋಮವಾರ ಬಯಲಿಗೆಳೆಯಲ್ಪಟ್ಟ ಬಳ್ಳಾರಿ ಐಸಿಸ್ ಜಾಲವನ್ನು ಮಿನಾಜ್ ಅಲಿಯಾಸ್ ಮೊಹಮ್ಮದ್ ಸುಲೈಮಾನ್ ನಿರ್ವಹಿಸುತ್ತಿದ್ದ. ಮಿನಾಜ್ ಹಾಗೂ ಈತನ ಸಹಚರ ಸಯ್ಯದ್ ಸಮೀರ್‌ನನ್ನು ಬಳ್ಳಾರಿಯಲ್ಲಿ ಬಂಧಿಸಲಾಗಿದೆ.ಉಳಿದಂತೆ ಮೊಹಮ್ಮದ್ ಮುನಿರುದ್ದೀನ್, ಮೊಹಮ್ಮದ್ ಮುಜಾಮ್ಮಿಲ್, ಸಯ್ಯದ್ ಸಮೈಉಲ್ಲಾನನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ.
ಅನಾಸ್ ಇಕ್ಬಾಲ್ ಶೇಖ್‌ನನ್ನು ಮುಂಬೈನಲ್ಲಿ, ದೆಹಲಿಯಲ್ಲಿ ಶಯಾನ್ ರಹಮಾನ್ ಮತ್ತು ಜೆಮ್‌ಶೆಡ್‌ಪುರದಲ್ಲಿ ಮೊಹಮ್ಮದ್ ಶಹಬಾರ್ ಅಲಿಯಾಸ್ ಝಲ್ಫಿಕರ್ ಅಲಿಯಾಸ್ ಗುಡ್ಡುನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.ಕಳೆದ ವಾರವೂ ಆಗಿತ್ತು:ಕಳೆದ ವಾರ ಕೂಡಾ ಎನ್‌ಐಎ ತಂಡ ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಮತ್ತು ಜಾರ್ಖಂಡ್‌ನ 40 ಸ್ಥಳಗಳ ಮೇಲೆ ದಾಳಿ 15 ಜನರನ್ನು ಬಂಧಿಸಿತ್ತು. ಬೆಂಗಳೂರಿನಲ್ಲಿ ಒಬ್ಬನನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಲಾಗಿತ್ತು.