ತೀರ್ಥಹಳ್ಳಿ : ಅಡಕೆ ಕಳ್ಳತನ: ಕಳ್ಳತನಕ್ಕೆ ಬಳಸಿದ ವಾಹನದ ಸಹಿತ ಮೂವರು ಆರೋಪಿಗಳ ಸೆರೆ

| Published : Jul 26 2024, 01:40 AM IST / Updated: Jul 26 2024, 04:32 AM IST

ಸಾರಾಂಶ

ನಾಲ್ಕು ಪ್ರತ್ಯೇಕ ಕಳ್ಳತನದ ಪ್ರಕರಣಗಳನ್ನು ಭೇದಿಸಿರುವ ಮಾಳೂರು ಪೊಲೀಸರು ಕಳ್ಳತನ ಮಾಡಲಾಗಿದ್ದ ವಸ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ ವಾಹನದ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ತೀರ್ಥಹಳ್ಳಿ ; ಮಾಳೂರು ಠಾಣಾ ವ್ಯಾಪ್ತಿಯ ಕರಕುಚ್ಚಿಯಲ್ಲಿ ನಡೆದಿದ್ದ ಅಡಕೆ ಕಳ್ಳತನ ಸೇರಿದಂತೆ ನಾಲ್ಕು ಕಳ್ಳತನದ ಪ್ರಕರಣಗಳನ್ನು ಭೇದಿಸಿರುವ ಮಾಳೂರು ಪೊಲೀಸರು ಕಳ್ಳತನ ಮಾಡಲಾಗಿದ್ದ ವಸ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ ವಾಹನದ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಡಕೆ ಕಳ್ಳತನ ಪ್ರಕರಣ ದಲ್ಲಿ ಬಂಧಿತರಾದ ಆರೋಪಿಗಳು ಹನುಮಂತ, ಅಭಿಷೇಕ್ ಮತ್ತು ತುಕಾರಾಜ್. ಈ ಮೂವರೂ ಶಿಕಾರಿಪುರ ತಾಲೂಕಿನ ಹರಗವಳ್ಳಿ ಗ್ರಾಮದವರಾಗಿದ್ದಾರೆ. ಆರೋಪಿಗಳಿಂದ ಕಳ್ಳತನ ಮಾಡಿದ್ದ ಅಡಕೆ ಮತ್ತು ಕಳ್ಳತನಕ್ಕೆ ಬಳಸಿದ್ದ ವಾಹನವನ್ನೂ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಕರಕುಚ್ಚಿ ಗ್ರಾಮದ ದೇವದಾಸ್ ಎಂಬುವವರ ಮನೆಯಲ್ಲಿ ಸುಮಾರು ಒಂದು ಲಕ್ಷ ರು. ಮೌಲ್ಯದ ಚಾಲಿ ಅಡಕೆ ಕಳ್ಳತನವಾಗಿದ್ದು, ಪ್ರಕರಣ ಮಾಳೂರು ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಳ್ಳತನ ಮಾಡಿದ ಅಡಕೆ ಮತ್ತು ಸಾಗಿಸಿದ ವಾಹನ ಸಹಿತ ಮೂವರು ಆರೋಪಿ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾಳೂರು ಠಾಣಾ ವ್ಯಾಪ್ತಿಯ ಮಾಳೂರಿನ ಎರಡು ಹಾಗೂ ಬಾಳಗಾರು ಸಮೀಪದ ಒಂದು ದೇವಸ್ಥಾನದಲ್ಲಿ ನಡೆದಿದ್ದ ಪ್ರಕರಣಗಳನ್ನೂ ಪತ್ತೆ ಮಾಡಿರುವ ಪೊಲೀಸರು ಸುಮಾರು ಒಂದು ಲಕ್ಷ ರು. ಮೌಲ್ಯದ ಘಂಟೆ ಹಾಗೂ ಪೂಜಾ ಸಾಮಗ್ರಿಗಳೊಂದಿಗೆ ಆರೋಪಿಗಳಾದ ಭದ್ರಾವತಿಯವರಾದ ಅರುಣ್‌ಲಾಲ್ ಹಾಗೂ ಆಕಾಶ್ ಎಂಬುವವರನ್ನು ಬಂಧಿಸಿದ್ದಾರೆ.

ಡಿವೈಎಸ್‌ಪಿ ಗಜಾನನ ಸುತಾರ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಸಿಪಿಐ ಶ್ರೀಧರ್, ಪಿಎಸ್‌ಐ ಕುಮಾರ್ ಮತ್ತು ಶಿವಾ ನಂದ್, ಎಚ್‌ಸಿ ಸುರಕ್ಷಿತ್ ಮತ್ತು ರಾಜಶೇಕರ್, ಪಿಸಿಗಳಾದ ಪ್ರದೀಪ್, ವಿವೇಕ್, ಪುನೀತ್, ಸಂತೋಷ್ ಕಾರ್ಯನಿರ್ವಹಿಸಿದ್ದರು.