ತಾಯಿಯಿಂದಲೇ ತಂದೆಗೆ ಬೆದರಿಕೆ ಇತ್ತು- ತಾಯಿ- ತಂಗಿ ಇಬ್ಬರಿಗೂ ಖಿನ್ನತೆ ಇತ್ತು : ಓಂ ಪುತ್ರ

| N/A | Published : Apr 22 2025, 11:08 AM IST

Former Karnataka DGP Om Prakash

ಸಾರಾಂಶ

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ

ಬೆಂಗಳೂರು : ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಮೃತರ ಪುತ್ರ ಕಾರ್ತಿಕೇಶ್‌ ನೀಡಿದ ದೂರಿನ ಮೇರೆಗೆ ಓಂ ಪ್ರಕಾಶ್‌ ಅವರ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 103(1) ಮತ್ತು 3(5) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?:

ನನ್ನ ತಾಯಿ ಪಲ್ಲವಿ ಅವರು ನನ್ನ ತಂದೆ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಅವರಿಗೆ ಕಳೆದ ಒಂದು ವಾರದಿಂದ ಕೊಲೆ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ತಂದೆ ಓಂ ಪ್ರಕಾಶ್‌ ಅವರು ತಮ್ಮ ಸಹೋದರಿ ಸರಿತಾ ಕುಮಾರಿ ಅವರ ಮನೆಗೆ ತೆರಳಿದ್ದರು. ಎರಡು ದಿನಗಳ ಹಿಂದೆ ಸರಿತಾ ಕುಮಾರಿ ಅವರ ಮನೆಗೆ ತೆರಳಿ ನನ್ನ ತಂಗಿ ಕೃತಿ ತಂದೆ ಓಂ ಪ್ರಕಾಶ್‌ ಅವರನ್ನು ಬಲವಂತವಾಗಿ ಮನೆಗೆ ಕರೆತಂದಿದ್ದರು.

ಭಾನುವಾರ ಸಂಜೆ ಸುಮಾರು 5 ಗಂಟೆಗೆ ನಾನು ದೊಮ್ಮಲೂರಿನ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನಲ್ಲಿದ್ದೆ. ನಮ್ಮ ಪಕ್ಕದ ಮನೆಯ ಜಯಶ್ರೀ ಶ್ರೀಧರನ್‌ ಅವರು ನನಗೆ ಕರೆ ಮಾಡಿ, ನಿಮ್ಮ ತಂದೆ ಓಂ ಪ್ರಕಾಶ್‌ ಅವರ ದೇಹ ಕೆಳಗಡೆ ಬಿದ್ದಿದೆ ಎಂದು ತಿಳಿಸಿದರು. ತಕ್ಷಣ ನಾನು ಸುಮಾರು ಸಂಜೆ 5.45ಕ್ಕೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಇದ್ದರು. ನಮ್ಮ ತಂದೆ ತಲೆಗೆ ಮತ್ತು ಮೈತುಂಬಾ ರಕ್ತವಾಗಿತ್ತು. ದೇಹದ ಪಕ್ಕದಲ್ಲಿ ಒಡೆದ ಬಾಟಲ್‌ ಹಾಗೂ ಚಾಕು ಇದ್ದವು. ನಂತರ ತಂದೆಯ ಮೃತದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.

ತಾಯಿ-ತಂಗಿ ಮೇಲೆ ಶಂಕೆ:

ನಮ್ಮ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ನಮ್ಮ ತಂದೆಯೊಂದಿಗೆ ಜಗಳ ಮಾಡುತ್ತಿದ್ದರು. ಈ ಇಬ್ಬರೇ ಸೇರಿ ನಮ್ಮ ತಂದೆಯನ್ನು ಕೊಲೆ ಮಾಡಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ತಿಕೇಶ್‌ ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ತನಿಖಾ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಪೊಲೀಸರ ತನಿಖೆ ಬಗ್ಗೆ ನಮಗೆ ನಂಬಿಕೆ ಇದೆ

-ಕಾರ್ತಿಕೇಶ್‌, ಓಂ ಪ್ರಕಾಶ್‌ ಪುತ್ರ.