ಖಿನ್ನತೆ ಉಂಟಾದರೆ ಅಪ್ತರ ಜತೆ ನಮಸ್ಯೆ ಹಂಚಿಕೊಳ್ಳಿ

| Published : Oct 11 2024, 11:51 PM IST

ಖಿನ್ನತೆ ಉಂಟಾದರೆ ಅಪ್ತರ ಜತೆ ನಮಸ್ಯೆ ಹಂಚಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿ ಎನಾದರೂ ಕೊರತೆ ಮತ್ತು ಖಿನ್ನತೆ ಕಂಡುಬಂದರೆ ಆಪ್ತರು ಜೊತೆ ಹಂಚಿಕೊಳ್ಳಬೇಕು. ಯಾವುದೇ ಒಂದು ಒತ್ತಡಕ್ಕೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾದವರು ಈ ರೋಗದಿಂದ ಪಾರಾಗಲು ನಿಮ್ಮ ನೋವನ್ನು ಇನ್ನೋಬ್ಬರಲ್ಲಿ ಹಂಚಿ ಕೊಳ್ಳುವುದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇತ್ತೀಚೆಗೆ ಮಾನಸಿಕ ರೋಗವೆನ್ನುವುದು ಮನುಷ್ಯರಲ್ಲಿ ಸಾಮಾನ್ಯವಾಗುತ್ತಿದೆ, ಮಾನಸಿಕ ರೋಗವು ಖಿನ್ನತೆ ರೂಪದಲ್ಲಿ ಆವರಿಸಿಕೊಳ್ಳುತ್ತದೆ. ಖಿನ್ನತೆ ಇದೆ ಎಂದು ಗೊತ್ತಾದಲ್ಲಿ ಅದನ್ನು ನಿಮ್ಮ ಆಪ್ತರು ಅಥವಾ ಸ್ನೇಹಿತರ ಜೊತೆ ಹಂಚಿಕೊಳ್ಳುವುದರ ಮೂಲಕ ಮತ್ತು ವೈದ್ಯರಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಈ ಕಾಯಿಲೆಯಿಂದ ಹೊರಬರಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಅಧ್ಯಕ್ಷೆ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯಾ ಭವಾನಿ ತಿಳಿಸಿದರು.

ಗುರುವಾರ ಷೆಲ್ ಅಪರೆಲ್ಸ್ ಪ್ರೈ. ಲಿ.ನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ಷೆಲ್ ಅಪರೆಲ್ಸ್ ಪ್ರೈ. ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ”ಯನ್ನು ಉದ್ಘಾಟಿಸಿ ಮಾತನಾಡಿದರು.

ಆಪ್ತರ ಜತೆ ಹಂಚಿಕೊಳ್ಳಿ

ಮಾನಸಿಕ ಕಾಯಿಲೆಗೆ ಹೆದರುವ ಅವಶ್ಯಕತೆ ಇಲ್ಲ, ನಮ್ಮಲ್ಲಿ ಎನಾದರೂ ಕೊರತೆ ಮತ್ತು ಖಿನ್ನತೆ ಕಂಡುಬಂದರೆ ಆಪ್ತರು ಜೊತೆ ಹಂಚಿಕೊಳ್ಳಬೇಕು ಇಲ್ಲವಾದಲ್ಲಿ ಮಾನಸಿಕ ರೋಗ ನಮ್ಮನ್ನು ನಾಶಪಡಿಸುತ್ತದೆ. ನಾವು ಮಾಡುವ ಕೆಲಸ ಕಾರ್ಯಗಳಿಂದ ಸಂತೃಪ್ತಿ ಸಿಗದೆ ಒತ್ತಡಕ್ಕೆ ಮತ್ತು ಖಿನ್ನತೆಗೆ ಒಳಗಾಗಿ, ಮಾನಸಿಕ ರೋಗವು ಬರುತ್ತದೆ, ಯಾವುದೇ ಒಂದು ಒತ್ತಡಕ್ಕೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾದವರು ಈ ರೋಗದಿಂದ ಪಾರಾಗಲು ನಿಮ್ಮ ನೋವನ್ನು ಇನ್ನೋಬ್ಬರಲ್ಲಿ ಹಂಚಿ ಕೊಳ್ಳುವುದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ, ಆರೋಗ್ಯ ಎಂಬುದು ಪ್ರತಿಯೊಬ್ಬರಿಗು ಬಹಳ ಮುಖ್ಯ. ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಜನರಲ್ಲಿ ಮಾನಸಿಕ ಜಾಗೃತಿಯನ್ನು ಮೂಡಿಸುವುದೇ ಇದರ ಉದ್ದೇಶ ಎಂದರು.

ಜನತೆಗೆ ಜಾಗೃತಿ ಮೂಡಿಸಿ

ವಿವಿಧ ದೇಶಗಳಲ್ಲಿ ಇದರ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. 150 ಕ್ಕಿಂತ ಹೆಚ್ಚು ದೇಶಗಳು ಕಾರ್ಯಕ್ರಮದಲ್ಲಿ ಕೈ ಜೋಡಿಸಿ ಪ್ರತಿಯೊದು ದೇಶ, ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ಗೊಳಿಸಿ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದೇವೆ. ಈ ವರ್ಷ ‘ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯವಿದು’ ಎಂಬ ಘೋಷ ವಾಕ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್, ಮನೋವೈದ್ಯೆ ಡಾ. ಲಾವಣ್ಯ ಮಾನಸಿಕ ಆರೋಗ್ಯದ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ನ್ಯಾ. ಬಿ.ಶಿಲ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್, ಮನೋವೈದ್ಯ ಡಾ.ಜಿ. ಹೇಮಂತ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಮುರಳಿ ಮೋಹನ್, ಷೆಲ್ ಅಪೆರಲ್ಸ್ ಪ್ರೈ.ಲಿ ನ ಮಾನವ ಸಂಪನ್ಮೂಲ ಆಡಳಿತ ವ್ಯವಸ್ಥಾಪಕ ಬಿ.ಆರ್. ಅನಂತ್, ಕಾರ್ಮಿಕ ಅಧಿಕಾರಿ ಮಂಜುಳ, ಕಾರ್ಮಿಕರು ಇದ್ದರು.