ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆಯುರ್ವೇದಿಕ್ ಚಿಕಿತ್ಸೆಯಿಂದ ಮಾನಸಿಕ ಖಿನ್ನತೆ ದೂರ ಮಾಡಬಹುದಾಗಿದೆ ಎಂದು ಶ್ರೀ ಸದ್ಗುರು ಚಿಕಿತ್ಸಾಲಯದ ವೈದ್ಯಕೀಯ ನಿರ್ದೇಶಕಿ ಡಾ.ಚಿತ್ರಲೇಖಾ ವಿ.ಕೃಷ್ಣ ಹೇಳಿದರು.ಇಲ್ಲಿನ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್, ಸ್ಪಂದನ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ಮಾನಸಿಕ ಖಿನ್ನತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಹದಿಹರೆಯದ ಮಕ್ಕಳಲ್ಲಿ ಹಾಗೂ ಹೆಣ್ಣುಮಕ್ಕಳಲ್ಲಿ ಮಾನಸಿಕ ಖಿನ್ನತೆ ಸಾಮಾನ್ಯವಾಗಿದೆ. ಅಪೌಷ್ಠಿಕತೆಯಿಂದಾಗಿ ಖಿನ್ನತೆ ಉಂಟಾದರೂ ಕೂಡ ಸಾಮಾಜಿಕ ಜಾಲತಾಣಗಳ ಬಳಕೆ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಮೊಬೈಲ್, ಅಂತರ್ಜಾಲದ ಸಂಪರ್ಕದಿಂದಾಗಿ ಮಕ್ಕಳು ತಮ್ಮ ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರು.ಮಾನಸಿಕ ಖಿನ್ನತೆ ದೂರ ಮಾಡಲು ಆಯುರ್ವೇದದಿಂದ ಸಾಧ್ಯವಾಗುತ್ತದೆ. ಆಯುರ್ವೇದ ಎಂಬುದು ವಿಜ್ಞಾನಕ್ಕೂ ಮೀರಿದ ಶಾಸ್ತ್ರವಾಗಿದೆ. ಅದು ಕೇವಲ ಮದ್ದಲ್ಲ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯ ಪ್ರಕೃತಿದತ್ತವಾಗಿದೆ. ಆಯುರ್ವೇದ ಒಂದು ರೀತಿಯಲ್ಲಿ ಆರ್ಟ್ ಆಫ್ ಲಿವಿಂಗ್ ಎಂದು ಹೇಳಿದರು.
ಒಳ್ಳೆಯ ಆಲೋಚನೆ, ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿನಿಯರ ಮೇಲಿದೆ ಎಂದ ಅವರು ಪ್ರಾತ್ಯಕ್ಷತೆಯ ಮೂಲಕ ವಿದ್ಯಾರ್ಥಿನಿಯರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಹದಿಹರೆಯದ ಸಮಸ್ಯೆಗಳೇನು? ಅದಕ್ಕೆ ಪರಿಹಾರಗಳೇನು ಎಂದು ವಿವರಿಸಿದರು.ರೆಡ್ ಕ್ರಾಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಪಿ.ಆರ್.ಮಮತಾ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎಂ.ನಾಗರಾಜ್, ಸ್ಪಂದನ ಮಹಿಳಾ ಸಬಲೀಕರಣ ಘಟಕದ ಸಂಚಾಲಕರಾದ ಪ್ರೊ. ರೂಹಿ ಸಲ್ಮಾ, ಪ್ರೊ. ಗಾಯತ್ರಿ ಟಿ. ಮುಂತಾದವರಿದ್ದರು.