ಜ್ವರ ಕಡಿಮೆ ಮಾಡಲು ಮಕ್ಕಳಿಗೆ ಊದುಬತ್ತಿಯಿಂದ ಸುಡುವ ಪಾಲಕರು! ಈವರೆಗೆ 18 ಪ್ರಕರಣ ಬೆಳಕಿಗೆ

| N/A | Published : Apr 12 2025, 10:42 AM IST

mohali news team of three involved in human trafficking of infants arrested asc

ಸಾರಾಂಶ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ಪೋಷಕರು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ.

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ಪೋಷಕರು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ.

ಕನಕಗಿರಿ ತಾಲೂಕಿನ ವಿಠ್ಠಲಾಪುರದಲ್ಲಿ 7 ತಿಂಗಳ ಮಗುವಿಗೆ ಜ್ವರ ಕಡಿಮೆಯಾಗಲಿಲ್ಲ ಎಂದು ಮಗುವಿನ ತಾಯಿ ಡಿ. 4 ರಂದು ಊದುಬತ್ತಿಯಿಂದ ಸುಟ್ಟಿದ್ದಳು. ಬಳಿಕ ಮಗುವಿಗೆ ಚಿಕಿತ್ಸೆ ಕೊಡಿಸಲು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಫೆ.2ರಂದು ನಡೆದ ಶಿಶು ಮರಣ ತಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್, ಕೂಡಲೇ ಪಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಯಲ್ಲಿ ಮಕ್ಕಳು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಮಾಡಿದಾಗ, ಜ್ವರ ಬಂದ ಮಕ್ಕಳಿಗೆ ಪೋಷಕರು ಊದುಬತ್ತಿಯಿಂದ ಸುಟ್ಟಿರುವುದು ಗೊತ್ತಾಗಿದೆ. ಹೀಗಾಗಿ, ಈ ಕುರಿತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಈ ಮಕ್ಕಳ ಬಗ್ಗೆ ನಿಗಾವಹಿಸಿ ಮತ್ತು ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದಾರೆ.

ಊದುಬತ್ತಿಯಿಂದ ಮಕ್ಕಳಿಗೆ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯಇಲಾಖೆಯಿಂದ 18 ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇಂಥ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಬೇಕು.

ಮಹಾಂತೇಶ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೊಪ್ಪಳ