ವಾಹನ ಸವಾರರ ತಪ್ಪಿಗೆ ಪಾದಚಾರಿ ಜೀವ ಹರಣ: ಶರತ್‌ ಚಂದ್ರ ಬೇಸರ

| Published : Nov 20 2024, 01:15 AM IST

ಸಾರಾಂಶ

ವಾಹನ ಸವಾರರು ಎಸಗುವ ತಪ್ಪುಗಳಿಂದ ಅಮಾಯಕ ಪಾದಚಾರಿಗಳು ಪ್ರಾಣ ಕಳೆದುಕೊಳ್ಳುತ್ತಿದಾರೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಶರತ್‌ ಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ 2020ರಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ವಾಹನ ಸವಾರರ ತಪ್ಪಿಗೆ ಪಾದಚಾರಿಗಳು ಸಾವನ್ನಪ್ಪುತ್ತಿದ್ದಾರೆ. ಈ ವರ್ಷದ ಅಕ್ಟೋಬರ್‌ ಅಂತ್ಯದವರೆಗ 723 ಮಂದಿ ಸಾವನ್ನಪ್ಪಿದ್ದು, ಸತ್ತವರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ. ಇದನ್ನು ನಿಯಂತ್ರಿಸಲು ಜಾಗೃತಿ ಅಗತ್ಯ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ತಿಳಿಸಿದರು.

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಶಾಂತಿನಗರ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅತಿವೇಗದ ನಿಯಂತ್ರಣಕ್ಕಾಗಿ ಸಮೂಹ ಮಾಧ್ಯಮ ಅಭಿಯಾನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2023ರಲ್ಲಿ ರಸ್ತೆ ಅಪಘಾತದಿಂದ 12,321 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಅದರಲ್ಲಿ 5,387 ಮಂದಿ ದ್ವಿಚಕ್ರವಾಹನ ಸವಾರರಾಗಿದ್ದು, 2,418 ಮಂದಿ ಪಾದಚಾರಿಗಳಾಗಿದ್ದಾರೆ. ಬೆಂಗಳೂರು, ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಮೋಟಾರು ಸೈಕಲ್‌ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಹೆದ್ದಾರಿಯಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ವಾಹನಗಳ ವೇಗಕ್ಕೆ ನಿಯಂತ್ರಣ ಹೇರಬೇಕಿದೆ ಎಂದರು.

ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್‌.ವಿ. ಪ್ರಸಾದ್ ಮಾತನಾಡಿ, ಬೆಂಗಳೂರು ಒಂದರಲ್ಲೇ 1 ಕೋಟಿ ವಾಹನಗಳಿದ್ದು, ಅವುಗಳನ್ನು ನಿಯಂತ್ರಿಸುವುದು ಕಷ್ಟವಾಗಿದೆ. ವಾಹನ ಚಾಲನೆ ಮಾಡುವಾಗ ಎಚ್ಚರವಹಿಸಬೇಕು. ಇಲ್ಲದಿದ್ದರೆ, ಅಪಘಾತದಲ್ಲಿ ಅಮಾಯಕರು ಬಲಿಯಾಗುವಂತಾಗುತ್ತದೆ. ಅಪಘಾತ ನಿಯಂತ್ರಣಕ್ಕಾಗಿ ಜನರು ಹೆಚ್ಚಾಗಿ ಸಮೂಹ ಸಾರಿಗೆಯನ್ನು ಬಳಸಬೇಕು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಸಮೂಹ ಸಾರಿಗೆ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಮುಂದಿನ 5 ವರ್ಷಗಳಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸಾರಿಗೆ ಇಲಾಖೆ ಆಯುಕ್ತ ಯೋಗೇಶ್‌, ನಿಮ್ಹಾನ್ಸ್‌ ನಿವೃತ್ತ ನಿರ್ದೇಶಕ ಗುರುರಾಜ್‌ ಇದ್ದರು.