ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ನಡೆಸಿದ್ದ ಕ್ರೌರ್ಯಕ್ಕೆ ಪುರಾವೆ ಎನ್ನಲಾಗಿರುವ ಫೋಟೋಗಳು ಬಹಿರಂಗ

| Published : Sep 06 2024, 01:04 AM IST / Updated: Sep 06 2024, 04:14 AM IST

Renukaswamy Mother

ಸಾರಾಂಶ

ಆರೋಪಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ, ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ನಡೆಸಿದ್ದ ಕ್ರೌರ್ಯಕ್ಕೆ ಪುರಾವೆ ಎನ್ನಲಾಗಿರುವ ಕೆಲ ಫೋಟೋಗಳು ಗುರುವಾರ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿವೆ.

 ಬೆಂಗಳೂರು : ಆರೋಪಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ, ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ನಡೆಸಿದ್ದ ಕ್ರೌರ್ಯಕ್ಕೆ ಪುರಾವೆ ಎನ್ನಲಾಗಿರುವ ಕೆಲ ಫೋಟೋಗಳು ಗುರುವಾರ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿವೆ.

ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆಗೂ ಮುನ್ನ ತನ್ನನ್ನು ಬಿಟ್ಟು ಬಿಡುವಂತೆ ಕೈ ಮುಗಿದು ದರ್ಶನ್‌ ಗ್ಯಾಂಗ್ ಬಳಿ ರೇಣುಕಾಸ್ವಾಮಿ ಕಣ್ಣೀರಿಡುತ್ತಾ ಬೇಡಿಕೊಂಡಿದ್ದಾನೆ. ಅಲ್ಲದೆ ಶೆಡ್‌ನಲ್ಲಿ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಹಾಗೂ ಹತ್ಯೆಗೂ ಮುನ್ನ ಪಬ್‌ನಲ್ಲಿ ತಮ್ಮ ಆಪ್ತರ ಜತೆ ನಟ ದರ್ಶನ್‌ ನಡೆಸಿದ್ದ ಪಾರ್ಟಿಯ ಮರುಸೃಷ್ಟಿಯ ಫೋಟೋಗಳು ಬಯಲಾಗಿವೆ.

ಈ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಪೊಲೀಸರು ಲಗತ್ತಿಸಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಪ್ರಿಯತಮೆ ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಜೂ.8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು ಬಳಿಕ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರಹಿಂಸೆ ಮಾಡಿ ನಟ ದರ್ಶನ್ ಹಾಗೂ ಅವರ ಸಹಚರರು ಹತ್ಯೆಗೈದಿದ್ದರು ಎಂಬ ಆರೋಪವಿದೆ. ಈ ಕೃತ್ಯದ ತನಿಖೆ ನಡೆಸಿ ಬುಧವಾರ ನಗರದ ಎಸಿಎಂಎಂ ನ್ಯಾಯಾಲಯಕ್ಕೆ 3991 ಪುಟಗಳ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ದರ್ಶನ್‌ ಗ್ಯಾಂಗ್ ಕ್ರೌರ್ಯದ ಫೋಟೋಗಳು ಬಯಲಾಗಿವೆ ಬಿರುಗಾಳಿ ಎಬ್ಬಿಸಿದೆ.

ವಿನಯ್ ಮೊಬೈಲ್‌ನಲ್ಲಿದ್ದ ಫೋಟೋಗಳು: ತಮ್ಮ ಪ್ರಿಯತಮೆ ಪವಿತ್ರಾಗೌಡಳಿಗೆ ಇನ್‌ಸ್ಟಾಗ್ರಾಂನಲ್ಲಿ ಗೌತಮ್‌ ಹೆಸರಿನ (goutham_ks_1990) ಖಾತೆಯಲ್ಲಿ ನಿರಂತರವಾಗಿ ಅಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಕರೆತರುವಂತೆ ಚಿತ್ರದುರ್ಗದ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ದರ್ಶನ್ ಸೂಚಿಸಿದ್ದರು. ಅಂತೆಯೇ ಜೂ.8 ರಂದು ಶನಿವಾರ ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಅಪಹರಿಸಿ ರಾಘವೇಂದ್ರ, ಅನುಕುಮಾರ್‌, ರವಿಶಂಕರ್‌ ಹಾಗೂ ಜಗದೀಶ್ ಕರೆತಂದಿದ್ದರು. ದಾರಿಯುದ್ದಕ್ಕೂ ರೇಣುಕಾಸ್ವಾಮಿ ಮೇಲೆ ರಾಘವೇಂದ್ರ ತಂಡ ಹಲ್ಲೆ ನಡೆಸಿತ್ತು. ಬಳಿಕ ಪಟ್ಟಣಗೆರೆ ಶೆಡ್‌ಗೆ ಮಧ್ಯಾಹ್ನ ಬಂದ ರೇಣುಕಾಸ್ವಾಮಿ ಮೇಲೆ ಅಲ್ಲಿದ್ದ ದರ್ಶನ್ ಸಹಚರರು ಹಲ್ಲೆ ನಡೆಸಿದ್ದರು.

ಆಗ ತನ್ನನ್ನು ಬಿಟ್ಟು ಬಿಡುವಂತೆ ರೇಣುಕಾಸ್ವಾಮಿ ಬೇಡಿಕೊಳ್ಳುವ ಫೋಟೋವನ್ನು ಪಟ್ಟಣಗೆರೆ ವಿನಯ್‌ ಮೊಬೈಲ್‌ಗೆ ಶೆಡ್‌ನ ಕಾವಲುಗಾರರು ಕಳುಹಿಸಿದ್ದರು. ಈ ಹತ್ಯೆ ಬಳಿಕ ತನ್ನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ವಿನಯ್‌ ಡಿಲೀಟ್ ಮಾಡಿದ್ದ. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಹೊಸ ಸಿಮ್ ಖರೀದಿಸಿ ವಿನಯ್‌ ಅಳಿಸಿ ಹಾಕಿದ್ದ ಫೋಟೋ ಹಾಗೂ ಸಂದೇಶಗಳನ್ನು ರಿಟ್ರೀವ್ ಮಾಡಿ ಪೊಲೀಸರು ಸಂಗ್ರಹಿಸಿದ್ದಾರೆ. ಈ ಫೋಟೋಗಳನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ಲಗತ್ತಿಸಿದ್ದಾರೆ ಎಂದು ತಿಳಿದು ಬಂದಿದೆ.

ಮರು ಸೃಷ್ಟಿಯ ಫೋಟೋ: ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತರುವ ಮುನ್ನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಆಪ್ತ ಪಟ್ಟಣಗೆರೆ ವಿನಯ್‌ ಒಡೆತನದ ಸ್ಟೋನಿಬ್ರೂಕ್‌ ಪಬ್‌ನಲ್ಲಿ ದರ್ಶನ್ ಇದ್ದರು. ಅಂದು ಆ ಪಬ್‌ನಲ್ಲಿ ತಮ್ಮ ಆಪ್ತರಾದ ನಟ ಚಿಕ್ಕಣ್ಣ, ವಿನಯ್‌, ನಾಗರಾಜ್‌, ಪವನ್‌ ಹಾಗೂ ಪ್ರದೂಷ್ ಜತೆ ದರ್ಶನ್ ಮದ್ಯ ಸೇವಿಸಿ ಊಟ ಮಾಡಿದ್ದರು ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಅವರ ಆಪ್ತರ ಬಂಧನ ಬಳಿಕ ಮತ್ತೆ ಹತ್ಯೆ ನಡೆದ ದಿನ ದರ್ಶನ್‌ ಇದ್ದ ಪಬ್‌ನಲ್ಲಿ ಭೋಜನ ಕೂಟದ ಸನ್ನಿವೇಶವನ್ನು ಮರುಸೃಷ್ಟಿಸಿ ಪೊಲೀಸರು ಮಹಜರ್ ಮಾಡಿದ್ದರು. ಆಗ ತೆಗೆದಿದ್ದ ಫೋಟೋ ವೈರಲ್ ಆಗಿದೆ.

‘ಡಿ ಬಾಸ್ ಸಫಾರಿ’ ಕೋಣೆ!: ತನ್ನ ಸ್ಟೋನಿ ಬ್ರೂಕ್ ಪಬ್‌ನಲ್ಲಿ ದರ್ಶನ್‌ ಅವರಿಗೆ ‘ಡಿ ಬಾಸ್ ಸಫಾರಿ’ ಹೆಸರಿನಲ್ಲಿ ಪ್ರತ್ಯೇಕ ರೂಮ್‌ ಅನ್ನು ವಿನಯ್‌ ವಿನ್ಯಾಸಗೊಳಿಸಿ ಮೀಸಲಿಟ್ಟಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ರೂಮ್‌ನಲ್ಲೇ ರೇಣುಕಾಸ್ವಾಮಿ ಹತ್ಯೆ ದಿನ ತಮ್ಮ ಆಪ್ತರ ಜತೆ ದರ್ಶನ್ ಪಾರ್ಟಿ ನಡೆಸಿದ್ದರು. ಈ ರೂಮ್‌ನ ಫೋಟೋ ಕೂಡ ಬಹಿರಂಗವಾಗಿ ಸಿಕ್ಕಾಪಟ್ಟೆ ಚರ್ಚೆ ಹುಟ್ಟು ಹಾಕಿದೆ.

ಹಲ್ಲೆ ನಡೆಸಿದ ಲಾಠಿ: ಅಲ್ಲದೆ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲು ಬಳಸಿದ ಲಾಠಿ, ಮರದ ಕಡ್ಡಿಗಳು ಹಾಗೂ ಆತನಿಗೆ ವಿದ್ಯುತ್ ಶಾಕ್ ಕೊಡಲು ಬಳಸಿದ್ದ ಮೆಗ್ಗರ್ ಡಿವೈಸ್‌ ಮತ್ತು ಮೃತದೇಹ ಸಾಗಿಸಿದ ಬಿಳಿಯ ಸ್ಕಾರ್ಪಿಯೋ ಫೋಟೋಗಳು ಕೂಡ ಬಹಿರಂಗವಾಗಿವೆ.