ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಮೇಲೆ ಆರೋಪ ಪಟ್ಟಿ : ಚಾರ್ಜ್‌ಶೀಟ್ನಲ್ಲಿ ಏನೇನಿದೆ..?

| Published : Sep 05 2024, 02:22 AM IST / Updated: Sep 05 2024, 03:57 AM IST

DARSHAN GANG

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ವಿರುದ್ಧ 3991 ಪುಟಗಳ ಆರೋಪಪಟ್ಟಿ ಸಲ್ಲಿಕೆ. ಅಶ್ಲೀಲ ಸಂದೇಶ ಕಳುಹಿಸಿದ್ದೇ ಹತ್ಯೆಗೆ ಕಾರಣ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖ.

 ಬೆಂಗಳೂರು :  ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ನಟ ದರ್ಶನ್ ಹಾಗೂ ಅವರ ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ 3991 ಪುಟಗಳ ಬೃಹತ್‌ ಆರೋಪಪಟ್ಟಿಯನ್ನು ಬುಧವಾರ ಪೊಲೀಸರು ಸಲ್ಲಿಸಿದ್ದಾರೆ. ‘ಇದರಲ್ಲಿ ಇಡೀ ಕೃತ್ಯಕ್ಕೆ ಕಾರಣ ಆಗಿದ್ದು ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳಿಸಿದ್ದ ಅಶ್ಲೀಲ ಸಂದೇಶ’ ಎಂದು ಉಲ್ಲೇಖಿಸಲಾಗಿದೆ.

ಎಸಿಎಂಎಂ ನ್ಯಾಯಾಲಯಕ್ಕೆ 7 ಸಂಪುಟಗಳ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಎನ್‌.ಚಂದನ್ ಕುಮಾರ್‌ ಸಲ್ಲಿಸಿದ್ದಾರೆ.

‘ಆರೋಪಪಟ್ಟಿಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಮಾಡಿ ದರ್ಶನ್ ಗ್ಯಾಂಗ್ ಬರ್ಬರವಾಗಿ ಹತ್ಯೆಗೈದಿದೆ. ಇದಕ್ಕೆ ಸಾಂದರ್ಭಿಕ, ವೈದ್ಯಕೀಯ, ಪ್ರತ್ಯಕ್ಷ ಹಾಗೂ ವೈಜ್ಞಾನಿಕ ಪುರಾವೆಗಳು ಸಿಕ್ಕಿವೆ. ರೇಣುಕಾಸ್ವಾಮಿ ಹತ್ಯೆಗೆ ಪವಿತ್ರಾಗೆ ಆತ ಅಶ್ಲೀಲ ಸಂದೇಶ ಕಳುಹಿಸಿದ್ದೇ ಕಾರಣ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಆರೋಪ ಪಟ್ಟಿಯಲ್ಲಿ ಎ1 ಪವಿತ್ರಾಗೌಡ ಹಾಗೂ ಎ2 ದರ್ಶನ್‌ ಎಂದು ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿಯನ್ನು ಕೊಂದಿರುವುದಾಗಿ ದರ್ಶನ್ ಗ್ಯಾಂಗ್‌ ವಿಚಾರಣೆ ವೇಳೆ ನೀಡಿದೆ ಎನ್ನಲಾದ ತಪ್ಪೊಪ್ಪಿಗೆ ಹೇಳಿಕೆಗಳು ಹಾಗೂ ನಟರಾದ ಚಿಕ್ಕಣ್ಣ ಮತ್ತು ಯಶಸ್‌ ಸೂರ್ಯ ಸೇರಿ ಇತರೆ ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಎದೆ ಮತ್ತು ವೃಷಣದ ಮೇಲೆ ಕಾಲಿಟ್ಟು ದರ್ಶನ್ ಕ್ರೌರ್ಯ ಮೆರೆದಿದ್ದರು. ಅವರ ಹೊಡೆತದ ತೀವ್ರತೆಗೆ ರೇಣುಕಾಸ್ವಾಮಿ ವೃಷಣಗಳು ನಜ್ಜುಗುಜ್ಜಾಗಿದ್ದವು. ರೇಣುಕಾಸ್ವಾಮಿ ಮೇಲೆ ದರ್ಶನ್‌ ಕ್ರೂರವಾಗಿ ಹಲ್ಲೆ ಮಾಡಿದ್ದರೆ, ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿದ್ದರು. ದರ್ಶನ್‌ ಬಟ್ಟೆ ಹಾಗೂ ಪವಿತ್ರಾ ಚಪ್ಪಲಿಯ ಮೇಲೆ ರೇಣುಕಾಸ್ವಾಮಿ ಚಪ್ಪಲಿ ಕಲೆಗಳು ಪತ್ತೆಯಾಗಿವೆ. ಅದು ಡಿಎನ್‌ಎ ಪರೀಕ್ಷೆಯಲ್ಲೂ ಸಾಬೀತಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಹೆಚ್ಚುವರಿ ಆರೋಪ ಪಟ್ಟಿ ಬಾಕಿ:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದೇವೆ. ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳಿಂದ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ 231 ಸಾಕ್ಷಿಗಳು ಒಳಗೊಂಡಂತೆ 3991 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನೂ ತನಿಖೆ ಬಾಕಿ ಇದ್ದು, ಮುಂದಿನ ಹಂತದಲ್ಲಿ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ಹೇಳಿದ್ದಾರೆ.

ಕೃತ್ಯಕ್ಕೆ ಕಾರಣ ಏನು?:

ಕಳೆದ ಮಾರ್ಚ್ ತಿಂಗಳಿಂದ ನಟ ದರ್ಶನ್‌ ಆಪ್ತೆ ಪವಿತ್ರಾಗೌಡ ಅವರಿಗೆ ನಿರಂತರವಾಗಿ ಇನ್‌ಸ್ಟಾಗ್ರಾಂನಲ್ಲಿ ಗೌತಮ್‌ ಹೆಸರಿನ (goutham_ks_1990) ಖಾತೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಈ ವಿಚಾರ ತಿಳಿದ ಕೆರಳಿದ ದರ್ಶನ್‌, ಚಿತ್ರದುರ್ಗದ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತರುವಂತೆ ಸೂಚಿಸಿದ್ದರು. ಅಂತೆಯೇ ಜೂ.8 ರಂದು ಶನಿವಾರ ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಅಪಹರಿಸಿ ರಾಘವೇಂದ್ರ, ಅನುಕುಮಾರ್‌, ರವಿಶಂಕರ್‌ ಹಾಗೂ ಜಗದೀಶ್ ಕರೆತಂದಿದ್ದರು. ಬಳಿಕ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹಾಗೂ ವಿದ್ಯುತ್ ಶಾಕ್ ಕೊಟ್ಟು ದರ್ಶನ್ ಗ್ಯಾಂಗ್ ಹತ್ಯೆ ಮಾಡಿತ್ತು.

ಮರುದಿನ ಭಾನುವಾರ ನಸುಕಿನಲ್ಲಿ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ಸಮೀಪ ರಾಜಕಾಲುವೆ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದರು. ಆದರೆ ಅದೇ ದಿನ ಕಾಲುವೆ ಬದಿಯಲ್ಲಿ ಅಪರಿಚಿತ ಮೃತದೇಹ ಕಂಡು ಅಲ್ಲಿನ ಅಪಾರ್ಟ್‌ಮೆಂಟ್ ಕಾವಲುಗಾರ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಅಪರಿಚಿತ ಮೃತದೇಹ ಪರಿಶೀಲಿಸಿದ ಪೊಲೀಸರಿಗೆ ಆತನನ್ನು ಬೇರೆಡೆ ಹತ್ಯೆಗೈದು ತಂದು ಕಾಲುವೆಗೆ ಎಸೆದಿರುವುದು ಗೊತ್ತಾಯಿತು. ಕೂಡಲೇ ಕಾಲುವೆ ಸಮೀಪದ ಅಪಾರ್ಟ್‌ಮೆಂಟ್ ಸೇರಿದಂತೆ ಕಟ್ಟಡಗಳ ಸಿಸಿಟಿವಿ ಪರಿಶೀಲಿಸಿದಾಗ ಹಂತಕರ ಜಾಡು ಪೊಲೀಸರಿಗೆ ಸಿಕ್ಕಿತು. ಅಷ್ಟರಲ್ಲಿ ದರ್ಶನ್‌ ಆಪ್ತರ ಸೂಚನೆ ಮೇರೆಗೆ ತಾವೇ ಹಣಕಾಸು ವಿಚಾರವಾಗಿ ರೇಣುಕಾಸ್ವಾಮಿಯನ್ನು ಕೊಂದಿದ್ದಾಗಿ ಹೇಳಿ ಚಿತ್ರದುರ್ಗದ ರಾಘವೇಂದ್ರ, ಗಿರಿನಗರದ ಕೇಶವಮೂರ್ತಿ, ನಿಖಿಲ್ ನಾಯ್ಕ್‌ ಹಾಗೂ ಕಾರ್ತಿಕ್‌ ಶರಣಾಗಿದ್ದರು. ಆದರೆ ಈ ನಾಲ್ವರ ವಿಚಾರಣೆ ವೇಳೆ ಹತ್ಯೆ ಹಿಂದಿರುವ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾಗೌಡ ಪಾತ್ರ ಬಯಲಾಯಿತು. ಈ ಮಾಹಿತಿ ಮೇರೆಗೆ ಜೂ.11 ರಂದು ದರ್ಶನ್ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.

7 ಸಂಪುಟ, 3991 ಪುಟ, 231 ಸಾಕ್ಷಿಗಳ ಹೇಳಿಕೆ

ದರ್ಶನ್ ಗ್ಯಾಂಗ್ ವಿರುದ್ಧ 7 ಸಂಪುಟಗಳ 10 ಕಡತಗಳಲ್ಲಿ 3991 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್‌ ಅಡಿ ಸಾಕ್ಷಿ ಹೇಳಿಕೆ ನೀಡಿದ್ದ ನಟರಾದ ಚಿಕ್ಕಣ್ಣ, ಯಶ್‌ ಸೂರ್ಯ, ಪಟ್ಟಣಗೆರೆ ಶೆಡ್‌ನ ಕಾವಲುಗಾರರು, ಆರ್‌ಟಿಓ ಅಧಿಕಾರಿಗಳು, ವೈದ್ಯರು, ತಹಶೀಲ್ದಾರ್‌, ಎಂಜಿನಿಯರ್‌ಗಳು, ಹಾಗೂ ಮೃತದೇಹ ಸಾಗಾಣಿಕೆಗೆ ಬಳಸಲಾದ ಜೀಪ್‌ ಮಾಲಿಕರು ಸೇರಿದಂತೆ ಒಟ್ಟು 231 ಸಾಕ್ಷಿಗಳ ಹೇಳಿಕೆಗಳು ದಾಖಲಾಗಿವೆ. ಅಲ್ಲದೆ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ, ಮಡಿವಾಳ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಹಾಗೂ ಹೈದರಾಬಾದ್‌ನಲ್ಲಿರುವ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲದ (ಎಫ್‌ಎಸ್‌ಎಲ್‌) ವರದಿಗಳು ಕೂಡಾ ಲಗತ್ತಿಸಲಾಗಿದೆ. 

ಸಾಕ್ಷಿದಾರರ ವಿವರ

ಪ್ರತ್ಯಕ್ಷ ಸಾಕ್ಷಿದಾರರು 3

ಎಫ್‌ಎಸ್ಎಲ್-ಸಿಎಫ್‌ಎಸ್‌ಎಲ್‌ 8

ಪೊಲೀಸರ ಮುಂದೆ ಸಾಕ್ಷಿ70 ಜನ

ಕೋರ್ಟ್‌ ಮುಂದೆ ಸಾಕ್ಷಿ27 ಜನ

ಪಂಚರು 59

ಸರ್ಕಾರಿ ಅಧಿಕಾರಿಗಳು 8

ಪೊಲೀಸರು56

**ಒಟ್ಟು231

ಮರ್ಮಾಂಗದ ಪೋಟೋ ಕಳುಹಿಸಿದ್ದ ರೇಣುಕಾ

ಪವಿತ್ರಾಗೌಡಳಿಗೆ ತನ್ನ ಮರ್ಮಾಂಗದ ಪೋಟೋ ಕಳುಹಿಸಿ ರೇಣುಕಾಸ್ವಾಮಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ ಎನ್ನಲಾಗಿದೆ. ಅಲ್ಲದೆ ಮೃತನ ಹಾಗೂ ಆರೋಪಿ ಪವಿತ್ರಾಗೌಡ ಮೊಬೈಲ್‌ನಲ್ಲಿ ಅಳಿಸಿ ಹಾಕಲಾಗಿದ್ದ ಸಂದೇಶಗಳನ್ನು ಪೊಲೀಸರು ರಿಟ್ರೀವ್‌ ಮಾಡಿ ಸಂಗ್ರಹಿಸಿದ್ದಾರೆ. ಇದರಲ್ಲಿ ಪವಿತ್ರಾಗೌಡಳಿಗೆ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳು ಪತ್ತೆಯಾಗಿವೆ. ಈ ಮಾಹಿತಿಯನ್ನು ಕೂಡ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.  

ಆರೋಪಿಗಳ ವಿವರ

ಎ1.ಪವಿತ್ರಾಗೌಡ

ಎ2.ದರ್ಶನ್‌

ಎ3.ಪುಟ್ಟಸ್ವಾಮಿ ಅಲಿಯಾಸ್ ಪವನ್

ಎ4.ರಾಘವೇಂದ್ರ

ಎ5.ನಂದೀಶ್

ಎ6.ಜಗದೀಶ್‌

ಎ7.ಅನುಕುಮಾರ್‌

ಎ8.ರವಿಶಂಕರ್‌

ಎ9.ಧನರಾಜ್‌

ಎ10.ಪಟ್ಟಣಗೆರೆ ವಿನಯ್‌

ಎ11.ನಾಗರಾಜ್‌

ಎ12.ಲಕ್ಷ್ಮಣ್

ಎ13.ದೀಪಕ್‌

ಎ14.ಪ್ರದೂಷ್‌

ಎ15.ಕಾರ್ತಿಕ್‌

ಎ16.ಕೇಶವಮೂರ್ತಿ

ಎ17.ನಿಖಿಲ್ ನಾಯ್ಕ್‌

............................

ಕೊಲೆ ಬಯಲಾದ ಘಳಿಗೆ

ಜೂ.8 ಬೆಳಗ್ಗೆ 11 ಗಂಟೆ- ಚಿತ್ರದುರ್ಗದಿಂದ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಅಪಹರಣ

ಮಧ್ಯಾಹ್ನ 2 ಗಂಟೆ-ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಕರೆತಂದ ದರ್ಶನ್ ಸಹಚರರು

ಸಂಜೆ 7- ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ

ರಾತ್ರಿ 2 ಗಂಟೆ- ಶೆಡ್‌ನಿಂದ ಮೃತದೇಹ ರವಾನೆ

ಜೂ.9 ಬೆಳಗ್ಗೆ 8 - ರಾಜಕಾಲುವೆ ಬಳಿ ಮೃತದೇಹ ಪತ್ತೆ

ಜೂ.10 ರಾತ್ರಿ 8- ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಶರಣಾದ ದರ್ಶನ್‌ ಸಹಚರರು

ಜೂ.11 ಬೆಳಗ್ಗೆ 11 ಗಂಟೆಗೆ- ದರ್ಶನ್ ಹಾಗೂ ಪವಿತ್ರಾಗೌಡ ಬಂಧನ

ಆರೋಪಪಟ್ಟಿಯಲ್ಲೇನಿದೆ?

1. ಪವಿತ್ರಾಗೌಡಗೆ ಮರ್ಮಾಂಗದ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ರೇಣುಕಾಸ್ವಾಮಿ ಆಹ್ವಾನಿಸಿದ್ದರಿಂದ ಕ್ರುದ್ಧರಾಗಿದ್ದ ದರ್ಶನ್‌

2. ಚಿತ್ರದುರ್ಗದ ರಾಘವೇಂದ್ರನ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿದ್ದರು. ದಾರಿಯುದ್ದಕ್ಕೂ ನಾಲ್ವರಿಂದ ಥಳಿತ

3. ಜೂ.8ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ರೋಷಾವೇಷ ಪ್ರದರ್ಶಿಸಿದ್ದ ನಟ

4. ಮರ್ಮಾಂಗಕ್ಕೆ ಕಾಲಿನಿಂದ ಒದ್ದಿದ್ದ ದರ್ಶನ್‌. ವೃಷಣ, ಎದೆ ಮೇಲೆ ಕಾಲಿಟ್ಟು ಹಿಂಸೆ ನೀಡಿದ್ದ ನಟ. ಇದರಿಂದ ರೇಣುಕಾ ವೃಷಣ ನಜ್ಜುಗುಜ್ಜು

5. ದರ್ಶನ್‌ ರೋಷದಿಂದ ಪ್ರಚೋದನೆಗೆ ಒಳಗಾಗಿ ಸಹಚರರಿಂದಲೂ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ. ಲಾರಿಗೆ ತಲೆ ಡಿಕ್ಕಿ6. ರೇಣುಕಾಸ್ವಾಮಿ ಕಂಡ ಕೂಡಲೇ ತಾನು ಧರಿಸಿದ್ದ ಚಪ್ಪಲಿಯಿಂದ ಆತನಿಗೆ ಥಳಿಸಿದ್ದ ಪವಿತ್ರಾಗೌಡ. ಆಕೆಯ ಚಪ್ಪಲಿಗೆ ಅಂಟಿದ್ದ ರಕ್ತದ ಕಲೆ

7. ಪವಿತ್ರಾಗೌಡ ಚಪ್ಪಲಿಯನ್ನು ಕಸಿದು ದರ್ಶನ್‌ರಿಂದಲೂ ಅಲ್ಲೆ. ಕಾಲಿಂದ ಒದ್ದು ‘ಹೋಗೋ ಅದೇನು ಮಾಡ್ತಿಯೋ ಮಾಡೋ’ ಎಂದು ಅಬ್ಬರ

8. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ ರೇಣುಕಾಸ್ವಾಮಿ. ಆಗ ಚಿಮ್ಮಿದ ರಕ್ತ ದರ್ಶನ್‌, ಆರೋಪಿಗಳ ಬಟ್ಟೆಗೆ

9. ಡಿಎನ್‌ಎ ಪರೀಕ್ಷೆಯಲ್ಲಿ ಆರೋಪಿಗಳ ಬಟ್ಟೆ, ಚಪ್ಪಲಿಯಲ್ಲಿ ಪತ್ತೆಯಾದ ರಕ್ತದ ಕಲೆಗೂ ರೇಣುಕಾಸ್ವಾಮಿ ರಕ್ತಕ್ಕೂ ಹೋಲಿಕೆಯಾಗಿದೆ

10. ಶವ ಸಾಗಣೆಗೆ ಬಳಸಿದ್ದ ಸ್ಕಾರ್ಪಿಯೋ ಕಾರು, ಶೆಡ್‌ನಲ್ಲಿ ಪತ್ತೆಯಾದ ದೊಣ್ಣೆಗಳಲ್ಲೂ ಪತ್ತೆಯಾದ ರಕ್ತದ ಕಲೆಯೂ ಪರೀಕ್ಷೆಯಲ್ಲಿ ಸಾಬೀತು