ಸಾರಾಂಶ
ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ ನನ್ನ ವಕೀಲರ ಮೂಲಕ ಸಿಐಡಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ.
ಬೆಂಗಳೂರು : ಲೈಂಗಿಕ ಹಗರಣ ಸಂಬಂಧ ತಾವು ವಿಚಾರಣೆಗೆ ಖುದ್ದು ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಮನವಿ ಮಾಡಿದ್ದಾರೆ.
ಬುಧವಾರ ಎಸ್‌ಐಟಿ ಅಧಿಕಾರಿಗಳಿಗೆ ತಮ್ಮ ವಕೀಲ ಅರುಣ್ ಮೂಲಕ ಪ್ರಜ್ವಲ್ ಕೋರಿಕೆ ಸಲ್ಲಿಸಿದ್ದಾರೆ. ಆದರೆ, ಈ ಮನವಿಗೆ ಎಸ್‌ಐಟಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲೈಂಗಿಕ ಹಗರಣದ ವಿಚಾರಣೆಗೆ ಹಾಜರಾಗುವಂತೆ ಸಂಸದರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಈ ಹಿನ್ನಲೆಯಲ್ಲಿ ತಾವು ವಿದೇಶದಲ್ಲಿದ್ದು, ವಿಚಾರಣೆಗೆ ಬರಲು ಏಳು ದಿನಗಳು ಅವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ವಿನಂತಿಸಿದ್ದಾರೆ.
ಪತ್ರದಲ್ಲೇನಿದೆ?
ನಮ್ಮ ಕಕ್ಷಿದಾರರಾದ ಪ್ರಜ್ವಲ್ ರವರ ಮನೆ ಮತ್ತು ಕಚೇರಿಗೆ ನೋಟಿಸ್ ಅನ್ನು ಎಸ್‌ಐಟಿ ಅಂಟಿಸಿದೆ. ಸಿಆರ್‌ಪಿಸಿ 41 ರಡಿ ವಿಚಾರಣೆಗೆ ಮೇ.1 ರಂದು ಹಾಜರಾಗುವಂತೆ ಬುಧವಾರ ನೋಟಿಸ್ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು, ಅವರಿಗೆ ನೋಟಿಸ್ ಬಗ್ಗೆ ತಿಳಿಸಲಾಗಿದೆ. ಹೀಗಾಗಿ ತಮ್ಮ ಸೂಚನೆಯಂತೆ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ನೀಡುವಂತೆ ವಕೀಲ ಅರುಣ್ ಕೋರಿದ್ದಾರೆ.