ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ವಿವಾದವೊಂದು ವಿಕೋಪಕ್ಕೆ ತಿರುಗಿದ್ದು, ಸ್ವಂತ ಅಕ್ಕ ಮತ್ತು ಆಕೆಯ ಕುಟುಂಬದ ಸದಸ್ಯರು ತಮ್ಮನ ಮನೆಗೆ ನುಗ್ಗಿ ದಾಂಧಲೇ ನಡೆಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದ ಘಟನೆ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಅಶ್ವಿನಿ ಎಂಬುವರು ನೀಡಿದ ದೂರಿನನ್ವಯ ಮೀನಾಕ್ಷಿ, ವೆಂಕಟೇಶ್‌, ಚೈತ್ರ ಮತ್ತು ಶಶಾಂಕ್‌ ಎಂಬುವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಉಮೇಶ್ ಮತ್ತು ಈತನ ಸಹೋದರಿ ಮೀನಾಕ್ಷಿ ನಡುವೆ ಆಸ್ತಿ ವಿವಾದವಿದ್ದು, ಇದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮೀನಾಕ್ಷಿ ಸೇರಿ ನಾಲ್ವರು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಜಯನಗರದ 1 ನೇ ಬ್ಲ್ಯಾಕ್‌ನ ಭೈರಸಂದ್ರದಲ್ಲಿರುವ ಉಮೇಶ್‌ ಅವರ ಮನೆಗೆ ಆಗಮಿಸಿ ಮನೆಯ ಮುಂದೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಹಾಗೂ ಕಿಟಕಿಯ ಗಾಜುಗಳನ್ನು ಹೊಡೆದು ಹಾಕಿ ದಾಂಧಲೇ ನಡೆಸಿದ್ದಾರೆ. ಮನೆಯ ಒಳಗಡೆ ಮತ್ತು ಹೊರಗಡೆ ಪೆಟ್ರೋಲ್‌ ಸುರಿದು ಮನೆಯೊಗಳಗೆ ಇದ್ದ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಅಶ್ವಿನಿ ಉಲ್ಲೇಖಿಸಿದ್ದಾರೆ.


ಉಮೇಶ್ ಸಹೋದರಿ ಮೀನಾಕ್ಷಿ, ಆಕೆಯ ಪತಿ ಹಾಗೂ ಮಕ್ಕಳು ಸೇರಿ ಉಮೇಶ್ ಅವರ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಕೈಯಲ್ಲಿ ಮಚ್ಚು, ದೊಣ್ಣೆಗಳನ್ನು ಹಿಡಿದು ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಪುಡಿಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕೃತ್ಯ ಸಾಕ್ಷಿಯಾಗಬಾರದೆಂದು ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಸಹ ಹೊಡೆದು ಹಾಕಿದ್ದಾರೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ!:

ದಾಂಧಲೆ ನಡೆಸಿದ ಮೀನಾಕ್ಷಿ ತಂಡ, ಅಷ್ಟಕ್ಕೇ ಸುಮ್ಮನಾಗದೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ವೇಳೆ ಮನೆಯೊಳಗಿದ್ದ ಉಮೇಶ್ ಪತ್ನಿ ಅಶ್ವಿನಿ ಮತ್ತು ಕುಟುಂಬಸ್ಥರು ಪ್ರಾಣಭಯದಿಂದ ಬೆಚ್ಚಿಬಿದ್ದಿದ್ದಾರೆ. ಕಂಗಾಲಾದ ಅಶ್ವಿನಿ ಅವರು ಕೂಡಲೇ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಉಮೇಶ್ ಅವರ ಪತ್ನಿ ಅಶ್ವಿನಿ ಅವರು, ಮೀನಾಕ್ಷಿ ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಗಳಿಗೆ ನೋಟಿಸ್‌ ನೀಡಲಾಗಿದೆ. ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.