500 ಕ್ರೈಂ ಘಟನಾ ಸ್ಥಳಾಧಿಕಾರಿ ನೇಮಕಕ್ಕೆ ಪ್ರಸ್ತಾಪನೆ ಸಲ್ಲಿಕೆ - ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಿಂದ ಮನವಿ

| N/A | Published : Mar 07 2025, 08:36 AM IST

KSRP
500 ಕ್ರೈಂ ಘಟನಾ ಸ್ಥಳಾಧಿಕಾರಿ ನೇಮಕಕ್ಕೆ ಪ್ರಸ್ತಾಪನೆ ಸಲ್ಲಿಕೆ - ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಿಂದ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲೇ ಮೊದಲ ಬಾರಿಗೆ ಅಪರಾಧ ಪ್ರಕರಣಗಳ ತನಿಖೆಯ ಸುಧಾರಣೆ ಸಲುವಾಗಿ ಠಾಣೆಗೊಬ್ಬ ಅಪರಾಧ ಘಟನಾ ಸ್ಥಳಾಧಿಕಾರಿ (ಸೊಕೊ-ಸೀನ್ಸ್‌ ಆಫ್‌ ಕ್ರೈಂ ಆಫೀಸರ್‌) ನೇಮಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

 ಗಿರೀಶ್ ಮಾದೇನಹಳ್ಳಿ

 ಬೆಂಗಳೂರು  : ದೇಶದಲ್ಲೇ ಮೊದಲ ಬಾರಿಗೆ ಅಪರಾಧ ಪ್ರಕರಣಗಳ ತನಿಖೆಯ ಸುಧಾರಣೆ ಸಲುವಾಗಿ ಠಾಣೆಗೊಬ್ಬ ಅಪರಾಧ ಘಟನಾ ಸ್ಥಳಾಧಿಕಾರಿ (ಸೊಕೊ-ಸೀನ್ಸ್‌ ಆಫ್‌ ಕ್ರೈಂ ಆಫೀಸರ್‌) ನೇಮಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

ಇದಕ್ಕಾಗಿ ಹೊಸದಾಗಿ 500 ಸೊಕೊ ಅಧಿಕಾರಿಗಳ ನೇಮಕಕ್ಕೆ ಸರ್ಕಾರಕ್ಕೆ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಸಂಬಂಧ ಆರ್ಥಿಕ ವೆಚ್ಚದ ಕುರಿತು ಹಣಕಾಸು ಇಲಾಖೆ ಜತೆ ಹಿರಿಯ ಅಧಿಕಾರಿಗಳು ಸಮಾಲೋಚಿಸಿದ್ದು, ಪ್ರಸ್ತಕ್ತ ಬಜೆಟ್‌ನಲ್ಲಿ ಸೊಕೊ ಅಧಿಕಾರಿಗಳ ನೇಮಕ ಘೋಷಣೆ ನಿರೀಕ್ಷೆ ಇದೆ.

ಯಾರಿದು ಸೊಕೊ ಅಧಿಕಾರಿಗಳು?: ದಿನೇ ದಿನೆ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸರ್ಕಾರ, ಅಪರಾಧ ಪ್ರಕರಣಗಳ ತನಿಖಾ ಗುಣಮಟ್ಟ ಸುಧಾರಣೆಗೆ ಮುಂದಾಯಿತು. ಅಂತೆಯೇ ಎರಡು ವರ್ಷಗಳ ಹಿಂದೆ ವಿದೇಶಗಳಲ್ಲಿರುವಂತೆ ರಾಜ್ಯದಲ್ಲಿ ಅಪರಾಧ ಕೃತ್ಯಗಳು ನಡೆದಾಗ ಘಟನಾ ಸ್ಥಳದಲ್ಲಿ ಪ್ರಾಥಮಿಕ ಹಂತದ ಸಾಂದರ್ಭಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಪ್ರತ್ಯೇಕವಾಗಿ ಸೊಕೊ ಅಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಿತ್ತು. ಮೂರು ವರ್ಷಗಳ ಹಿಂದೆ ಮೊದಲ ಹಂತವಾಗಿ 300 ಅಧಿಕಾರಿಗಳು ನೇಮಕಗೊಂಡಿದ್ದರು. ಬಳಿಕ ಬೆಂಗಳೂರಿಗೆ 30 ಹಾಗೂ ಇನ್ನುಳಿದ ಜಿಲ್ಲೆಗಳಿಗೆ 8 ರಿಂದ 10 ಸೊಕೊ ಅಧಿಕಾರಿಗಳು ನಿಯೋಜಿತರಾಗಿದ್ದರು. ಈ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

ಸೊಕೋ ಟೀಂ ಅಪರಾಧ ಕೃತ್ಯಗಳ ತನಿಖೆಯಲ್ಲೂ ಪ್ರಮುಖ ಪಾತ್ರವಹಿಸುತ್ತಿವೆ. ಹೀಗಾಗಿ ಪ್ರತಿ ಠಾಣೆಗೊಬ್ಬ ಸೊಕೊ ಅಧಿಕಾರಿ ನೇಮಕ್ಕೆ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 830 ಪೊಲೀಸ್ ಠಾಣೆಗಳಿವೆ. ಹೀಗಾಗಿ ಪ್ರಸುತ್ತ ಲಭ್ಯವಿರುವ 300 ಅಧಿಕಾರಿಗಳ ಜತೆ ಹೊಸದಾಗಿ 500 ಅಧಿಕಾರಿಗಳ ನೇಮಕ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಬೆರಳಚ್ಚು ವಿಲೀನಕ್ಕೆ ಚಿಂತನೆ

ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿರುವ ಬೆರಳಚ್ಚು ಘಟಕವನ್ನು ಸೊಕೊ ಜತೆ ವಿಲೀನಗೊಳಿಸುವ ಕುರಿತೂ ಇಲಾಖೆ ಚಿಂತನೆ ನಡೆಸಿದೆ. ಬೆರಳಚ್ಚು ಘಟಕದಲ್ಲಿ ಪಿಎಸ್‌ಐ ಸೇರಿ ಒಟ್ಟು 210 ಮಂಜೂರಾತಿ ಹುದ್ದೆಗಳಿವೆ. ಪ್ರಸುತ್ತ 116 ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನು ವಿಲೀನಗೊಳಿಸಿದರೆ ಸೊಕೊ ತಂಡ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

₹30 ಕೋಟಿ ಅನುದಾನಕ್ಕೆ ಕೋರಿಕೆ

ಎಫ್ಎಸ್‌ಎಲ್ ಆಧುನೀಕರಣಕ್ಕೆ ಪ್ರಸ್ತಕ ಅಯವಯ್ಯದಲ್ಲಿ ₹30 ಕೋಟಿ ಅನುದಾನಕ್ಕೆ ಇಲಾಖೆ ಮನವಿ ಮಾಡಿದೆ. ಅಪರಾಧ ಪ್ರಕರಣಗಳ ವೈಜ್ಞಾನಿಕ ಸಾಕ್ಷ್ಯಗಳ ವಿಶ್ಲೇಷಣೆಗೆ ಅತ್ಯಾಧುನಿಕ ಗುಣಮಟ್ಟದ ಉಪಕರಣ ಖರೀದಿಗೆ ಅನುದಾನ ಒದಗಿಸುವಂತೆ ಕೋರಲಾಗಿದೆ ಎಂದು ಮೂಲಗಳು ಹೇಳಿವೆ.