ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಎಸ್ಸಿ ಎಸ್ಟಿ ಸಭೆ ಅರ್ಥಪೂರ್ಣವಾಗಿ ನಡೆದಿದೆ. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ದಾಳಿ ನಡೆಸುತ್ತಿದ್ದು, ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ ಎಂದು ಎಸ್ಪಿ ಬಿ.ಟಿ ಕವಿತಾ ಅವರು ಹೇಳಿದರು.ನಗರದ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯಲ್ಲಿ ಕರೆಯಲಾಗಿದ್ದ, ಎಸ್ಸಿ ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮುಖಂಡರು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಯುವಜನತೆ ಗಾಂಜಾ ಹಾಗೂ ಜೂಜಾಟಕ್ಕೆ ಬಲಿಯಾಗುತ್ತಿದ್ದು, ಗಾಂಜಾ ಬೆಳೆಯುವ ವ್ಯಕ್ತಿ ಅಷ್ಟೇ ಅಲ್ಲದೇ ಜಮೀನನ್ನು ಅಮಾನತ್ತಿನಲ್ಲಿಡಬೇಕು ಹಾಗೂ ಜಿಲ್ಲೆಯಲ್ಲಿ ಎಸ್ಸಿ ಎಸ್ಟಿ ಪ್ರಕರಣಗಳು ದಾಖಲಾಗಿರುವ ಅಂಕಿ ಅಂಶಗಳ ಮಾಹಿತಿ ನೀಡಿ ಎಂದು ಕೇಳಿದ ಸಂದರ್ಭದಲ್ಲಿ ಎಸ್ಪಿ ಬಿ.ಟಿ ಕವಿತಾ ಅವರು ಮಾತನಾಡಿದರು.
ಎಸ್ಸಿ ಎಸ್ಟಿಗೆ ಸಂಬಂಧಪಟ್ಟಂತೆ 2023 ರಲ್ಲಿ 49, 2024 ರಲ್ಲಿ 37, 2025 ರಲ್ಲಿ 6 ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಪ್ರಕರಣಗಳಿಗೂ ಪರಿಹಾರವನ್ನು ನೀಡಲಾಗಿದೆ. 2023 ರಲ್ಲಿ 272 ಅಬಕಾರಿ ಪ್ರಕರಣ ದಾಖಲಾಗಿತ್ತು. 2024 ರಲ್ಲಿ 348 ಪ್ರಕರಣ ದಾಖಲಾಗಿದ್ದು, 2025ರಲ್ಲಿ 48 ಪ್ರಕರಣ ದಾಖಲಾಗಿದೆ ಎಂದರು.ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಗಳ ದಾಖಲು ಮಾಡುವ ಸಂಖ್ಯೆ ಹೆಚ್ಚಾಗಿದೆ. 2020 ರಲ್ಲಿ 27, 2021 ರಲ್ಲಿ 26, 2022 ರಲ್ಲಿ 28, 2023 ರಲ್ಲಿ 38, 2024 ರಲ್ಲಿ 37, 2025ರಲ್ಲಿ 19 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗಾಂಜಾ ಬೆಳೆದವರನ್ನು ಅರೆಸ್ಟ್ ಮಾಡಿದ ಮೇಲೆ ಜಮೀನಿನಲ್ಲಿ ಬೆಳೆದವರಿಗೆ ಶಿಕ್ಷೆ ಆಗಲಿದೆ. ಬಿ. ರಿಪೋರ್ಟ್ ಆಗುವುದಿಲ್ಲ. ಗಾಂಜಾ ಬೆಳದ ಜಮೀನನ್ನು ಅಮಾನತ್ತಿನಲ್ಲಿಡಲು ಸಾಧ್ಯವಿಲ್ಲ. ಆ ರೀತಿಯ ಕಾನೂನು ಇಲ್ಲ. ಪದೇ ಪದೇ ಜಮೀನಿನಲ್ಲಿ ಗಾಂಜಾ ಬೆಳೆದವರನ್ನು ಗಡಿಪಾರು ಮಾಡಲಾಗುವುದು ಎಂದರು.ಜಿಲ್ಲಾ ಮಟ್ಟದಲ್ಲಿ ಮಾದಕ ವಸ್ತುಗಳಿಂದಾಗುವ ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಗಾಂಜಾ ವಿಚಾರವನ್ನು ಇಲಾಖೆ ಹಾಗೂ ಸರ್ಕಾರ ತುಂಬಾ ಕಾಳಜಿಯಿಂದ ತೆಗೆದುಕೊಂಡಿದೆ. ಡ್ರಗ್ ಮುಕ್ತ ಸಮಾಜ ಆಗಬೇಕು ಎಂಬುದು ನಮ್ಮ ಧ್ಯೇಯ ಎಂದರು.
ನಾರ್ಕೋಟಿಕ್ ಡಾಗ್ ಇದ್ದು, ಪ್ರತೀ ಠಾಣಾ ಲಿಮಿಟ್‌ಗೂ ಕೂಡ ಕಳುಹಿಸಿ ಕೊಡಲಾಗುತ್ತಿದೆ. ಹನೂರಿನಲ್ಲಿ ನಮ್ಮ ಡಾಗ್ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಗಾಂಜಾವನ್ನು ಹುಡುಕಿದ್ದು, ಪ್ರಕರಣ ದಾಖಲಾಗಿದೆ. ಅದೇ ತರ ಇನ್ನು ಎಲ್ಲಾ ಠಾಣಾ ಲಿಮಿಟ್‌ಗೂ ಡಾಗ್ ಕಳುಹಿಸಲಾಗುವುದು. ಎಲ್ಲಿ ಗಾಂಜಾ ಸಂಬಂಧ ದೂರು ಬರುತ್ತದೆ ಅಲ್ಲಿಗೆ ಡಾಗ್ ಕಳುಹಿಸಿ ಪತ್ತೆ ಹಚ್ಚುವ ಕೆಲಸ ಮಾಡಲಾಗುವುದು ಎಂದರು.ನಾಲ್ಕೈದು ದಿನದ ಹಿಂದೆ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆದಿದ್ದು, ದೊಡ್ಡರಾಯಪೇಟೆ ಹತ್ತಿರ ಜಂಕ್ಷನ್ ಹಾಗೂ ಸತ್ತಿ ರಸ್ತೆಯ ಸೋಮವಾರಪೇಟೆ ಹತ್ತಿರ ಜಂಕ್ಷನ್ ಬ್ಲಾಕ್ ಸ್ಪಾಟ್ ಆಗಿದೆ. ಬ್ಲಾಕ್ ಸ್ಪಾಟ್ ಅಂದರೆ ಅಪಘಾತಗಳು ಹೆಚ್ಚಾಗುವ ಸ್ಥಳಗಳು ಅದನ್ನು ಸರಿಪಡಿಸಲು ಏನೇನು ಮಾಡಬೇಕು ಎಂದು ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಅವರಿಗೆ ನೀಡಿದ್ದೇವೆ, ಶೀಘ್ರದಲ್ಲೇ ಸರಿಪಡಿಸಲಿದ್ದಾರೆ. ಯಡಬೆಟ್ಟದ ಬಳಿಯು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿ ತಿಂಗಳ ಮೊದಲ ಭಾನುವಾರದಂತೆ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯನ್ನು ಪ್ರತಿ ಠಾಣೆಯಲ್ಲೂ ನಡೆಸಲಾಗುತ್ತಿದೆ. ಠಾಣಾ ಮಟ್ಟದಲ್ಲಿ ವಾಟ್ಸಪ್ ಗ್ರೂಪ್ ಅನ್ನು ಮಾಡಿಸಲು ವ್ಯವಸ್ಥೆ ಮಾಡಲಾಗುವುದು. ಠಾಣೆ ವ್ಯಾಪ್ತಿಯಲ್ಲಿ ಸಭೆ ನಡೆಸುವಾಗ ನಾಮಕಾವಸ್ಥೆಗೆ ಸಭೆ ನಡೆಸಬಾರದು ಎಂದು ಸಿಬ್ಬಂದಿಗಳಿಗೆ ಇದೇ ಸಂದರ್ಭದಲ್ಲಿ ಹೇಳಿದರು. ವೀಲಿಂಗ್ ದೂರು ಸಹ ಬಂದಿದ್ದು, ವಿಸಿಲಿಂಗ್ ಪೊಲೀಸ್ ಗಸ್ತು ಹೆಚ್ಚಾದ ಮೇಲೆ ಕಡಿಮೆಯಾಗಿದೆ ಆದರೂ ಕೆಲವು ಕಡೆ ಇದೆ ಎಂಬ ದೂರು ಈ ಸಭೆಯಲ್ಲಿ ಬಂದಿದ್ದರಿಂದ, ಅಲ್ಲಿಗೆ ವಿಸಿಲಿಂಗ್ ಪೊಲೀಸ್ ಗಸ್ತು ಹೆಚ್ಚು ಮಾಡಲಾಗುವುದು ಎಂದರು.ಯರಿಯೂರು ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಸಂಬಂಧ ಕ್ರಮ ಕೈಗೊಳ್ಳಬೇಕು ಹಾಗೂ ಸಾಗಡೆ ಗ್ರಾಮದಲ್ಲಿ ಹಬ್ಬ ಆಚರಣೆ ಸಂಬಂಧ ದೂರು ಬಂದಿಲ್ಲದಿದ್ದರೆ ಪೊಲೀಸರು ಮದ್ಯ ಪ್ರವೇಶಿಸುವುದು ಅಗತ್ಯವಿಲ್ಲ. ಪೊಲೀಸರು ಅನಗತ್ಯವಾಗಿ ಜನರಿಗೆ ತೊಂದರೆ ನೀಡಬಾರದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಎಎಸ್ಪಿ ಶಶಿಧರ್, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಡಿಎಸ್‌ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್‌ಗಳಾದ ಶ್ರೀಕಾಂತ್, ಬಸವರಾಜು ಸೇರಿದಂತೆ ದಲಿತ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಅಂಬರೀಶ್, ಸಂಘಸೇನಾ, ನಾಗೇಶ್ ಬೋಗಪುರ, ಶ್ರೀನಿನಾಸ್ ಅಂಬಳೆ, ಯರಿಯೂರು ರವಿಕುಮಾರ್, ಮುತ್ತಣ್ಣ, ರಂಗಸ್ವಾಮಿ, ಶಿವಣ್ಣ, ದೇವರಾಜು, ಚಂದು ಇದ್ದರು.