ಮೈಸೂರಲ್ಲಿ ವೇಶ್ಯೆ ಹತ್ಯೆ: ಮಂಡ್ಯ ವ್ಯಕ್ತಿಗೆ ಜೀವಾವಧಿ
KannadaprabhaNewsNetwork | Published : Oct 06 2023, 01:09 AM IST / Updated: Oct 07 2023, 11:23 AM IST
ಮೈಸೂರಲ್ಲಿ ವೇಶ್ಯೆ ಹತ್ಯೆ: ಮಂಡ್ಯ ವ್ಯಕ್ತಿಗೆ ಜೀವಾವಧಿ
ಸಾರಾಂಶ
ಮೈಸೂರಲ್ಲಿ ವೇಶ್ಯೆ ಹತ್ಯೆ: ಮಂಡ್ಯ ವ್ಯಕ್ತಿಗೆ ಜೀವಾವಧಿ, ಸಂಭೋಗ ಬಳಿಕ ಕೊಲೆ ಮಾಡಿ ಚಿನ್ನ, ಹಣದೊಂದಿಗೆ ಪರಾರಿಯಾಗಿದ್ದ ಗಿರೀಶ್
- ಸಂಭೋಗ ಬಳಿಕ ಕೊಲೆ ಮಾಡಿ ಚಿನ್ನ, ಹಣದೊಂದಿಗೆ ಪರಾರಿಯಾಗಿದ್ದ ಗಿರೀಶ್ - ಖುಲಾಸೆಗೊಳಿಸಿದ್ದ ಮೈಸೂರು ನ್ಯಾಯಾಲಯ । ಶಿಕ್ಷೆ ವಿಧಿಸಿದ ಹೈಕೋರ್ಟ್ ಕನ್ನಡಪ್ರಭ ವಾರ್ತೆ ಬೆಂಗಳೂರು ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಲಾಡ್ಜ್‌ಗೆ ಕರೆದೊಯ್ದು ಸಂಭೋಗ ನಡೆಸಿದ ನಂತರ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಚಿನ್ನಾಭರಣ ಮತ್ತು ಹಣ ದೋಚಿದ್ದ ವ್ಯಕ್ತಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಲೈಂಗಿಕ ಕಾರ್ಯಕರ್ತೆಯ ಅತ್ಯಾಚಾರ, ಕೊಲೆ ಮತ್ತು ದರೋಡೆ ಪ್ರಕರಣದಿಂದ ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ನಿವಾಸಿ ಕೆ.ಸಿ.ಗಿರೀಶ್ (31) ಎಂಬಾತನನ್ನು ಖುಲಾಸೆಗೊಳಿಸಿ ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮೈಸೂರಿನ ಲಷ್ಕರ್ ಠಾಣಾ ಪೊಲೀಸರು ಕ್ರಿಮಿನಲ್ ಮೇಲ್ಮನವಿಯನ್ನು ಸಲ್ಲಿಸಿದ್ದರು. ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠ, ಗಿರೀಶ್‌ನನ್ನು ಅಪರಾಧಿಯೆಂದು ತೀರ್ಮಾನಿಸಿತು. ಜತೆಗೆ, ಹತ್ಯೆ ಅಪರಾಧಕ್ಕೆ ಜೀವಾವಧಿ ಮತ್ತು 30 ಸಾವಿರ ರು. ದಂಡ, ದರೋಡೆ ಅಪರಾಧಕ್ಕೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದು, ಶಿಕ್ಷಾವಧಿಯನ್ನು ಏಕಕಾಲದಲ್ಲಿ ಪೂರೈಸಬೇಕು ಎಂದು ಸ್ಪಷ್ಪಪಡಿಸಿದೆ. ಅಲ್ಲದೆ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮೈಸೂರು ಸೆಷನ್ಸ್ ನ್ಯಾಯಾಲಯ ಮೃತ ಸಂತ್ರಸ್ತೆಯ ಪುತ್ರನನ್ನು ಪತ್ತೆ ಹಚ್ಚಿ ಆತನಿಗೆ ದಂಡ ಮೊತ್ತದ ಪೈಕಿ 35 ಸಾವಿರ ರು. ಹಣವನ್ನು ಹಸ್ತಾಂತರಿಸಬೇಕು. ಉಳಿದ ಐದು ಸಾವಿರ ರು. ಹಣವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು. ಅಪರಾಧಿಯು ಮುಂದಿನ 45 ದಿನಗಳಲ್ಲಿ ಮೈಸೂರಿನ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ನಿರ್ದೇಶಿಸಿದೆ. ಅತ್ಯಾಚಾರ ಕೇಸ್ ಖುಲಾಸೆ: ಸಂತ್ರಸ್ತೆ ಮತ್ತು ಅಪರಾಧಿ ಪರಸ್ಪರ ಒಪ್ಪಿಗೆ ಮೇರೆಗೆ ಸಂಭೋಗ ನಡೆಸಿದ್ದಾರೆ. ಪ್ರಕರಣದಲ್ಲಿ ಅತ್ಯಾಚಾರ ನಡೆದಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅತ್ಯಾಚಾರ ಆರೋಪದಿಂದ ಗಿರೀಶ್‌ನನ್ನು ಮುಕ್ತಗೊಳಿಸಿದ್ದ ಮೈಸೂರು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಕಾಯಂಗೊಳಿಸಿದೆ. ಪ್ರಕರಣದ ವಿವರ: 2010ರ ಸೆ.18ರಂದು ಮೈಸೂರಿನಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದ ಸಂತ್ರಸ್ತೆಯನ್ನು ಸಬ್ ಅರ್ಬನ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಾಡ್ಜ್‌ಗೆ ಗಿರೀಶ್ ಕರೆದೊಯ್ದಿದ್ದ. ಪತಿ-ಪತ್ನಿ ಎಂದು ಪರಿಚಯಿಸಿಕೊಂಡು ಲಾಡ್ಜ್ ರಿಜಿಸ್ಟರ್‌ನಲ್ಲಿ ರವಿ ಎಂಬ ಹೆಸರು ನಮೂದು ಮಾಡಿ ಕೊಠಡಿ ಪಡೆದುಕೊಂಡಿದ್ದ. ಸಂತ್ರಸ್ತೆಯೊಂದಿಗೆ ಸಂಭೋಗ ನಡೆಸಿದ ನಂತರ ಸೀರೆಯಿಂದ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಜತೆಗೆ, ಸಂತ್ರಸ್ತೆಯ ಚಿನ್ನದ ಕಿವಿಯೋಲೆ, ನೋಕಿಯಾ ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣ ದೋಚಿ ಪರಾರಿಯಾಗಿದ್ದ. ಕದ್ದವಸ್ತುಗಳನ್ನು ಗಿರಿವಿಯಿಟ್ಟು ಹಣ ಪಡೆದುಕೊಂಡಿದ್ದ. ಮರು ದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದು, ಲಾಡ್ಜ್ ಮಾಲೀಕ ಲಷ್ಕರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಗಿರೀಶ್‌ನನ್ನು ಬಂಧಿಸಿದ್ದರು. ಹತ್ಯೆ, ದರೋಡೆ ಮತ್ತು ಅತ್ಯಾಚಾರ ಪ್ರಕರಣ ಸಂಬಂಧ ಆರೋಪಗಳನ್ನು ನಿಗದಿಪಡಿಸಿ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ಎಲ್ಲ ಆರೋಪಗಳಿಂದ ಗಿರೀಶ್‌ನನ್ನು ಖುಲಾಸೆಗೊಳಿಸಿ 2016ರ ಏ.25ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿರುವ ಹೈಕೋರ್ಟ್ ಈ ಆದೇಶ ಮಾಡಿದೆ. ಪೊಲೀಸರ ಪರ ಸರ್ಕಾರಿ ಅಭಿಯೋಜಕ ಪಿ.ತೇಜೇಸ್ ವಾದಿಸಿದ್ದರು.