ಮಂಡ್ಯದಲ್ಲಿ ಸಲೂನ್‌ ಅಂಡ್‌ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ..!

| N/A | Published : May 18 2025, 01:47 AM IST / Updated: May 18 2025, 04:26 AM IST

ಮಂಡ್ಯದಲ್ಲಿ ಸಲೂನ್‌ ಅಂಡ್‌ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಪಿಇಎಸ್‌ ಕಾಲೇಜು ಪಕ್ಕದಲ್ಲಿರುವ ಕ್ಲೌಡ್‌-11 ಹೆಸರಿನ ಯೂನಿಸೆಕ್ಸ್‌ ಸಲೂನ್‌ ಅಂಡ್‌ ಸ್ಪಾ ಮೇಲೆ ದಾಳಿ ನಡೆಸಿ ದಂಧೆ ನಡೆಸುತ್ತಿದ್ದ ಸಲೂನ್‌ ಮಾಲಕಿ ಎಲಿಜೆಬತ್‌, ಓರ್ವ ಪಿಂಪ್, ಓರ್ವ ಗ್ರಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 ಮಂಡ್ಯ : ಸಲೂನ್‌ ಅಂಡ್‌ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇಂದ್ರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ, ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಪಿಇಎಸ್‌ ಕಾಲೇಜು ಪಕ್ಕದಲ್ಲಿರುವ ಕ್ಲೌಡ್‌-11 ಹೆಸರಿನ ಯೂನಿಸೆಕ್ಸ್‌ ಸಲೂನ್‌ ಅಂಡ್‌ ಸ್ಪಾ ಮೇಲೆ ದಾಳಿ ನಡೆಸಿ ದಂಧೆ ನಡೆಸುತ್ತಿದ್ದ ಸಲೂನ್‌ ಮಾಲಕಿ ಎಲಿಜೆಬತ್‌, ಓರ್ವ ಪಿಂಪ್, ಓರ್ವ ಗ್ರಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಪ್ರತಿಷ್ಠಿತ ಪಿಇಎಸ್‌ ಕಾಲೇಜು ಪಕ್ಕದಲ್ಲೇ ನಡೆಯುತ್ತಿದ್ದ ಕರಾಳ ದಂಧೆ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿಂದೆಯೂ ಕ್ಲೌಡ್ 11 ಹೆಸರಿನ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಹಲವು ವರ್ಷಗಳಿಂದ ಸಲೂನ್‌ ಅಂಡ್‌ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಸಲೂನ್ ಮಾಲಕಿ ಎಲಿಜೆಬತ್‌ ವಿರುದ್ಧ ಈ ಹಿಂದೆ ಮೈಸೂರು, ಮಂಡ್ಯದಲ್ಲೂ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.

ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಸಿಪಿಐ ನವೀನ್ ಸುಪ್ಪೇಕರ್ ನೇತೃತ್ವದಲ್ಲಿ ದಾಳಿ ನಡೆಸಿದರು. ಈಗಾಗಲೇ ಒಮ್ಮೆ ದಾಳಿ ನಡೆಸಿ ಸ್ಪಾವನ್ನು ಬಂದ್‌ ಮಾಡಿಸಿದ್ದರೂ ಮತ್ತೆ ದಂಧೆ ನಡೆಸಲು ಅವಕಾಶ ನೀಡಿದ ಆರೋಪದ ಮೇರೆಗೆ ಕಟ್ಟಡ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಒಡನಾಡಿ ಸಂಸ್ಥೆ ಪೊಲೀಸರನ್ನು ಆಗ್ರಹಪಡಿಸಿದೆ.

ಹೊರಗಿನಿಂದ ಮಹಿಳೆಯರನ್ನು ಕರೆತರುವುದರ ಜೊತೆಗೆ ಪಕ್ಕದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ದಂಧೆಯಲ್ಲಿ ತೊಡಗಿಸುವ ಪ್ರಯತ್ನಿಸಿದ್ದ ಆರೋಪವೂ ಕೇಳಿಬಂದಿದೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವ ಹಕ್ಕುಗಳ ಆಯೋಗ ಈ ರೀತಿ ವೇಶ್ಯಾವಾಟಿಕೆಗೆ ಅವಕಾಶ ನೀಡುವಂತಹ ಬಾಡಿಗೆ ಕ್ಷೇತ್ರವನ್ನು ಸೀಜ್‌ ಮಾಡಬೇಕೆಂದು ಸರ್ಕಾರ ಎಲ್ಲಾ ಜಿಲ್ಲೆಗಳಿಗೂ ಆದೇಶ ಮಾಡಿದೆ. ಅದೇ ರೀತಿ ಮಕ್ಕಳ ಕಲ್ಯಾಣ ಸಮಿತಿ ವಿದ್ಯಾರ್ಥಿಗಳು ಓದುವ ಜಾಗದಲ್ಲಿ ಇಂತಹ ವಿಕೃತಿ ನಡೆಯುತ್ತಿರುವ ಸಂಬಂಧ ನಗರಸಭೆಗೆ ನೋಟಿಸ್‌ ನೀಡಬೇಕು. ಆರು ತಿಂಗಳ ಹಿಂದೆಯೂ ನಡೆದಿದೆ ಎಂದರೆ ಮುಂದೆಯೂ ನಡೆಯುತ್ತದೆ. 

ಮಂಡ್ಯ ಜನರು ಮುಗ್ಧರು. ಈ ರೀತಿಯ ಅವಮಾನಗಳನ್ನು ಸಹಿಸಬಾರದು. ಮಕ್ಕಳು ಕಲಿಯುವ ಸ್ಥಳದಲ್ಲಿ ಈ ರೀತಿಯ ದಂಧೆ ನಡೆಯುತ್ತಿದೆ ಎಂದರೆ ಕಾನೂನು ಸುವ್ಯವಸ್ಥೆ, ಸುರಕ್ಷತೆ ಎಲ್ಲಿದೆ. ಮೈಸೂರನ್ನು ಬಿಟ್ಟು ಮಂಡ್ಯವನ್ನು ವೇಶ್ಯಾವಾಟಿಕೆಯ ಅಡ್ಡ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಯೂನಿಸೆಕ್ಸ್‌ ಸಲೂನ್‌ ಮತ್ತು ಸ್ಪಾ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ, ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ದಾಳಿ ನಡೆಸಿ ಮಾಲಕಿ ಎಲಿಜೆಬತ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಈ ಹಿಂದೆಯೂ ಇದೇ ಸ್ಪಾ ಮೇಲೆ ದಾಳಿ ನಡೆದಿತ್ತು. ನಂತರವೂ ಸ್ಪಾ ಮುಂದುವರೆಸಲು ಅವಕಾಶ ನೀಡಿರುವ ಕಟ್ಟಡ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಸ್ಪಾಗೆ ಲೈಸೆನ್ಸ್‌ ನೀಡಿದ್ದರೆ ರದ್ದುಗೊಳಿಸಲು ನಗರಸಭೆಗೆ ತಿಳಿಸಲಾಗುವುದು.

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಮಂಡ್ಯ

ಕ್ಲೌಡ್‌-11 ಯೂನಿಸೆಕ್ಸ್‌ ಮತ್ತು ಸ್ಪಾಗೆ ಯಾವುದೇ ಲೈಸೆನ್ಸ್‌ ಇಲ್ಲ. ಯಾವುದಕ್ಕೂ ಲೈಸೆನ್ಸ್‌ ಇಲ್ಲ. ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ನಿರಂತರವಾಗಿ ಪರಿಶೀಲಿಸಬೇಕಲ್ಲವೇ. ಲೈಸೆನ್ಸ್‌ ಪಡೆದಿದ್ದಾರಾ, ಇಲ್ಲವಾ, ಲೈಸೆನ್ಸ್‌ ನವೀಕರಣ ಆಗಿದೆಯಾ ಎಂಬುದನ್ನು ನೋಡಿದ್ದಾರಾ. ಸುಮ್ಮನೆ ಕೂರುವುದಕ್ಕಾ ಅಧಿಕಾರಿಗಳು ಇರೋದು. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಸ್ಥಳದಲ್ಲಿ ಇಂತಹ ವಿಕೃತಿ ನಡೆಯುವುದಾದರೆ ನಗರಸಭೆಗೆ ಬದ್ಧತೆ ಇಲ್ಲವೇ. ದಂಧೆಗೆ ಅವಕಾಶ ನೀಡಿರುವ ಕಟ್ಟಡ ಮಾಲೀಕರ ವಿರುದ್ಧವೂ ಕ್ರಮ ಆಗಬೇಕು.

- ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ

Read more Articles on