ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕವನ್ನು ಬಳಸಿಕೊಂಡು ರೀಲ್ಸ್ ಶೂಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರು : ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕವನ್ನು ಬಳಸಿಕೊಂಡು ರೀಲ್ಸ್ ಶೂಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನಕಪುರ ರಸ್ತೆಯ ಬಳಿ ವೀಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರೀಲ್ಸ್‌ ಮಾಡಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರ್ಲಕ್ಷ್ಯ ಮತ್ತು ಅಜಾಗರೂಕತೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೊದಲ್ಲಿ ರಜತ್ ಅವರು ಒಂದು ಕವರ್ ಒಳಗೆ ಪೆಟ್ರೋಲ್ ಹಾಕಿ, ಅದರ ಮೇಲೆ ಕಲ್ಲಿಟ್ಟು ಅದನ್ನು ಸ್ಫೋಟಗೊಳಿಸುವ ರೀತಿಯಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ಶೂಟಿಂಗ್ ನೇರವಾಗಿ ರಸ್ತೆಯ ಮೇಲೆಯೇ ನಡೆದಿರುವುದು ಇನ್ನಷ್ಟು ಆತಂಕಕಾರಿ ಸಂಗತಿಯಾಗಿದೆ. ಸಾಮಾನ್ಯವಾಗಿ ಜನರ ಸಂಚಾರ ಇರುವ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಮಾಡಿರುವುದು ಸಾರ್ವಜನಿಕ ಸುರಕ್ಷತೆಯ ಪ್ರಶ್ನೆಯಾಗಿದೆ.

ಸ್ಪಷ್ಟನೆ ನೀಡಿದ ರಜತ್‌:

ಈ ರೀತಿಯ ವಿಡಿಯೋ ಮಾಡುವ ಮೂಲಕ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದೀರಿ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರಜತ್‌ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿ ಕ್ಷಮೆಯೂ ಕೋರಿದ್ದಾರೆ. ‘ಪ್ರಮೋಷನಲ್‌ ವಿಡಿಯೋ ಮಾಡಿದ್ದೆವು. ಅದು ಸುದ್ದಿಯಾಗಿದೆ. ಯಾರಿಗೂ ತೊಂದರೆ ಮಾಡುವ ಉದ್ದೇಶವಿಲ್ಲ. ನಾನು ಕಲಾವಿದನಾಗಿ ಆ ರೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವುದು ಗೊತ್ತಾದ ತಕ್ಷಣವೇ ತಂಡದ ಸದಸ್ಯರಿಗೆ ತಿಳಿಸಿ ಡಿಲಿಟ್ ಮಾಡಿಸಿದ್ದೇನೆ ಎಂದು ರಜತ್‌ ಸ್ಪಷ್ಟನೆ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ವಿ:

ರೀಲ್ಸ್ ಮಾಡುವಾಗ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಯಾರಿಗೂ ಹಾನಿ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಕನಕಪುರ ರಸ್ತೆಯ ಬಳಿ ವಿಡಿಯೊ ಚಿತ್ರೀಕರಿಸಿದ್ದೆವು. ಆ ಊರಿನ ಮುಖಂಡರ ಅನುಮತಿಯನ್ನು ಪಡೆದುಕೊಂಡಿದ್ದೆವು ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ‘ರೀಲ್ಸ್‌’ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ರಜತ್‌ ಹಾಗೂ ವಿನಯ್‌ ಗೌಡ ಅವರನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದರು.