ಸಾರಾಂಶ
ಗರಿಯಾಬಂದ್(ಛತ್ತೀಸ್‌ಗಢ): ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಎಂದು ಛತ್ತೀಸ್‌ಗಢದ 21 ವರ್ಷದ ಯುವಕನಿಗೆ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಕರೆ ಮಾಡಿದ ಘಟನೆ ನಡೆದಿದೆ. ರಜತ್ ಬಳಸುತ್ತಿದ್ದ ಸಿಮ್ ಕಾರ್ಡ್ ಕೆಲವು ತಿಂಗಳುಗಳಿಂದ ನಿಷ್ಕ್ರಿಯವಾಗಿತ್ತು. ಟೆಲಿಕಾಂ ನಿಯಮ ಪ್ರಕಾರ 90 ದಿನಗಳ ಕಾಲ ಬಳಸದಿರುವ ಸಿಮ್ ಬೇರೆಯವರಿಗೆ ನೀಡಲಾಗುತ್ತದೆ. ಹೀಗಾಗಿ ರಜತ್ ಬಳಸುತ್ತಿದ್ದ ಅದೇ ನಂಬರ್‌ನ ಸಿಮ್ ಮನೀಶ್‌ಗೆ ಸಿಕ್ಕಿದೆ.
ವಾಟ್ಸಾಪ್ ಸಕ್ರಿಯಗೊಳಿಸಿದ ಮನೀಶ್‌ಗೆ ರಜತ್ ಫೋಟೋ ಕಾಣಿಸಿದೆ. ಅಲ್ಲದೆ, ಇತ್ತೀಚೆಗೆ ಆ ನಂಬರ್‌ಗೆ ಕೊಹ್ಲಿ, ವಿಲಿಯರ್ಸ್, ಯಶ್ ದಯಾಳ್ ಕರೆ ಮಾಡಿದ್ದಾರೆ. ಯಾರೋ ತಮಾಷೆಗಾಗಿ ಮಾಡುತ್ತಿದ್ದಾರೆ ಎಂದು ಭಾವಿಸಿ ಮನೀಶ್ ಸುಮ್ಮನಾಗಿದ್ದಾರೆ. ಬಳಿಕ ಸ್ವತಃ ರಜತ್ ಕರೆ ಮಾಡಿದ್ದು, ದಯವಿಟ್ಟು ನನ್ನ ಸಿಮ್ ಹಿಂದಿರುಗಿಸಿ ಎಂದಿದ್ದಾರೆ. ಇದನ್ನೂ ತಮಾಷೆಯ ಕರೆ ಎಂದು ಭಾವಿಸಿದ್ದಾರೆ. ಬಳಿಕ ರಜತ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಮನೀಶ್ ಮನೆಗೆ ಆಗಮಿಸಿದ ಬಳಿಕ ಅವರು ಸಿಮ್ ಹಿಂದಿರುಗಿಸಿದ್ದಾರೆ.