ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 17 ವರ್ಷ ಶಿಕ್ಷೆ ಹಾಗೂ 70 ಸಾವಿರ ದಂಡ ವಿಧಿಸಿ ಮಂಡ್ಯ ಅಧಿಕ ಸೇಷನ್ ಮತ್ತು ತ್ವರಿತ ಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ. ನಾಗಜ್ಯೋತಿ ತೀರ್ಪು ನೀಡಿದ್ದಾರೆ.ನಾಗಮಂಗಲ ತಾಲೂಕಿನ ಕೆ.ಹೊಸಳ್ಳಿ ಗ್ರಾಮದವರಾದ ಹಾಲಿ ಮಂಡ್ಯ ತಾಲೂಕಿನ ಸಾತನೂರು ಗ್ರಾಮಲ್ಲಿ ವಾಸವಾಗಿರುವ ಲೇ.ಗಂಗಾಧರ ಅವರ ಪುತ್ರ ಕೆ.ಜೆ.ಸಂಪತ್ ಶಿಕ್ಷೆಗೆ ಒಳಗಾದ ಅಪರಾಧಿ.
ಕಳೆದ 2015 ನವೆಂಬರ್ 6 ರಂದು ಅಪರಾಧಿ ಕೆ.ಜಿ.ಸಂಪತ್ (36) 13 ವರ್ಷದ ಬಾಲಕಿ ಶಾಲೆಗೆ ಹೋಗಿ ವಾಪಸ್ ಮಂಡ್ಯದ ಕಾಳಿಕಾಂಬ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಆರೋಪಿ ಬೈಕ್‌ನಲ್ಲಿ ಬಂದು ತಂಗಿಗೆ ಸೈಕಲ್ ತೆಗೆದುಕೊಂಡಿದ್ದು, ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಸಹಾಯ ಮಾಡು ಎಂದು ಹೇಳಿ ಬಾಲಕಿ ಸೈಕಲ್‌ಅನ್ನು ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿ ಬಲವಂತದಿಂದ ಕರೆದೊಯ್ದಿದ್ದಾನೆ.ನಂತರ ಮಂಡ್ಯದಿಂದ ಸುಮಾರು 8-10 ಕಿ.ಮೀ. ದೂರದಲ್ಲಿರುವ ಕೆರಗೋಡು ಹೋಬಳಿ ಹಂಪಾಪುರದ ಬಳಿಯ ನೀಲಗಿರಿ ಮರದ ಫಾರೆಸ್ಟ್‌ನ ನಿರ್ಜನ ಪ್ರದೇಶದಲ್ಲಿ ಚಾಕು ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು.
ನಂತರ ಆರೋಪಿಯನ್ನು ಪೂರ್ವಠಾಣೆ ಪೊಲೀಸರು ಬಂಧಿಸಿ ಪ್ರಕರಣವನ್ನು ಕೆರಗೋಡು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಆರೋಪಿ ವಿರುದ್ಧ ಕಲಂ 366(ಎ), 376, 511, 506 ಐಪಿಸಿ & ಕಲಂ 4,7,8,12 ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಬಿ.ಕೆ.ಸುರೇಶ್ ಕುಮಾರ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದರು.ಈ ಪ್ರಕರಣ ವಿಚಾರಣೆ ನಡೆಸಿದ ಮಂಡ್ಯ ಅಧಿಕ ಸಷನ್ಸ್ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎಂ.ನಾಗಜ್ಯೋತಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಕೆ.ಜಿ.ಸಂಪತ್ ಗೆ ಕಲಂ 366 ಅಡಿ ಅಪರಾಧಕ್ಕೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ರು ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಕಲಂ 376(2)(ಐ ) ಅಡಿ ಅಪರಾಧಕ್ಕೆ 12 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ರು ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ಹಾಗೂ ಕಲಂ 506 ಅಡಿ ಅಪರಾಧಕ್ಕೆ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.